ಕೋಲ್ಕತ್ತಾ : ಶಾರದಾ ಚಿಟ್ ಫಂಡ್ ಹಗರಣದ ತನಿಖೆಯಲ್ಲಿ ಬಿಜೆಪಿ ಅನ್ಯಾಯ ಮಾಡುತ್ತಿದ್ದು, ಟಿಎಂಸಿ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಕೋಲ್ಕತಾದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡಿದ್ದ ಮಮತಾ ಬ್ಯಾನರ್ಜಿ ಬಹುಕೋಟಿ ಹಗರಣ ಶಾರದಾ ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದು, ಪ್ರಕರಣದ ತನಿಖೆಯಲ್ಲಿ ಬಿಜೆಪಿ ಆಟವಾಡುತ್ತಿದೆ. ಸಿಬಿಐ ತನಿಖೆಯಲ್ಲಿ ಬಿಜೆಪಿ ಮಧ್ಯೆ ಪ್ರವೇಶಿಸುತ್ತಿದ್ದು, ಟಿಎಂಸಿ ಪಕ್ಷದ ನಾಯಕರಾದ ಮದನ್ ಮಿತ್ರಾ, ಸುಭೆಂದು ಹಾಗೂ ಮುಕುಲ್ ರಾಯ್ ಅವರ ಮೇಲೆ ಒತ್ತಡಹೇರುತ್ತಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಿಂದ ಎಷ್ಟೇ ಒತ್ತಡಹೇರಿದರೂ ಹಗರಣದ ತನಿಖೆಯಿಂದ ಪಕ್ಷ ಭಯಪಡುವುದಿಲ್ಲ. ಬಿಜೆಪಿ ವಿರುದ್ಧದ ನಮ್ಮ ಹೋರಾಟ ಮುಂದುವರೆಯುತ್ತಲೇ ಇರುತ್ತದೆ. ಒಂದು ವೇಳೆ ನನ್ನನ್ನು ಜೈಲಿಗೆ ಕಳುಹಿಸಿದರು ಕೂಡ ನನಗೆ ಭಯವಾಗುವುದಿಲ್ಲ. ಪ್ರಕರಣದಲ್ಲಿ ಪಕ್ಷದ ಯಾವುದೇ ನಾಯಕ ಜೈಲಿಗೆ ಹೋದರೂ ಪಕ್ಷ ಅವರ ಹಿಂದೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.