ಮುಂಬೈ : ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ಹೊಸ ದಾಖಲೆಯತ್ತ ದಾಪುಗಾಲಿಟ್ಟಿದ್ದು, ಹೂಡಿಕೆದಾರರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಬೆಳಿಗ್ಗೆ ಷೇರುವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 162.39 ಅಂಕಗಳ ಮುನ್ನಡೆಯನ್ನು ಸಾಧಿಸುವ ಮೂಲಕ 29,844.16 ಅಂಕಗಳನ್ನು ತಲುಪುವ ಮೂಲಕ ಹೊಸ ದಾಖಲೆಯ ಎತ್ತರವನ್ನು ಕಂಡಿತು.
ಇದೇ ವೇಳೆ ನಿಫ್ಟಿ 44.25 ಅಂಕಗಳ ಮುನ್ನಡೆಯನ್ನು ಸಾಧಿಸಿ 8,996.60 ಅಂಕಗಳ ಹೊಸ ಎತ್ತರದ ದಾಖಲೆಯನ್ನು ತಲುಪುವ ಮೂಲಕ 9 ಸಾವಿರ ಗಡಿಯತ್ತ ಸಾಗಿದೆ.
ಷೇರು ಮಾರುಕಟ್ಟೆಯಲ್ಲಿನ ಈ ಬೆಳವಣಿಗೆಗೆ ಕೇಂದ್ರ ಬಜೆಟ್ ಮತ್ತು ರಿಸರ್ವ್ ಬ್ಯಾಂಕ್ನ ಕೆಲ ನಿರ್ಧಾರಗಳೇ ಕಾರಣ ಎಂದು ಹೇಳಲಾಗುತ್ತಿದ್ದು, ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅವರು ಈ ಹಿಂದೆ ಬಡ್ಡಿದರಗಳ ಇಳಿಕೆ ಕುರಿತು ತೆಗೆದುಕೊಂಡಿದ್ದ ಕೆಲ ನಿರ್ಧಾರಗಳು ಷೇರುಮಾರುಕಟ್ಟೆಯ ಚೇತರಿಕೆಗೆ ಕಾರಣವಾಗಿದೆ.
ಇಂದಿನ ವಹಿವಾಟಿನಲ್ಲಿ ಐಟಿ ಶೇರುಗಳು ಮಾತ್ರವಲ್ಲದೆ ಸಾರ್ವಜನಿಕ ರಂಗದ ಬ್ಯಾಂಕುಗಳು, ತೈಲ ಹಾಗೂ ಅನಿಲ ಕಂಪೆನಿಗಳ ಷೇರುಗಳು ಭರಾಟೆಯ ಖರೀದಿಯನ್ನು ಕಂಡವು.