ನವದೆಹಲಿ : ಅಮೆರಿಕದಲ್ಲಿನ ಭಾರತೀಯ ರಾಯಭಾರಿಯಾಗಿದ್ದ ಎಸ್.ಜೈಶಂಕರ್ ಅವರನ್ನು ವಿದೇಶಾಂಗ ಇಲಾಖೆ ಕಾರ್ಯದರ್ಶಿಯನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
ಹಾಲಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅಧಿಕಾರದ ಅವಧಿ ಮೊಟಕುಗೊಳಿಸಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ತಡರಾತ್ರಿ ನಡೆದ ಸಂಪುಟ ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಗಸ್ಟ್ ನಲ್ಲಿ ಸುಜಾತಾ ಸಿಂಗ್ ಅವರ ಎರಡು ವರ್ಷದ ಅಧಿಕಾರಾವಧಿ ಮುಗಿಯಬೇಕಿತ್ತು.
ಹಾಲಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರನ್ನು ಯುಪಿಎ ನೇತೃತ್ವದ ಸರ್ಕಾರ ನೇಮಕ ಮಾಡಿತ್ತು. ಅವರ ಕಾರ್ಯವೈಖರಿ ಬಗ್ಗೆ ಸ್ವತಃ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೂ ಅಸಮಾಧಾನವಿತ್ತು. ಭಾರತದ ಯೋಜನೆಗಳ ಬಗ್ಗೆ ನೆರೆ ರಾಷ್ಟ್ರಗಳ ಜತೆ ನಿಕಟ ಸಂಪರ್ಕ ಮಾಡಿ ಮಾಹಿತಿ ನೀಡುತ್ತಿರಲಿಲ್ಲ ಎಂಬ ಆರೋಪ ಎದುರಿಸುತ್ತಿದ್ದರು.
ಗಣರಾಜ್ಯೋತ್ಸವ ದಿನದಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬೇಕು ಎಂದು ಪ್ರಧಾನಿ ಮೋದಿಯವರಿಗೆ, ಎಸ್.ಜೈಶಂಕರ್ ಸಲಹೆ ನೀಡಿದ್ದರು. ಈಗ ಅವರನ್ನು ವಿದೇಶಾಂಗ ಇಲಾಖೆ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ ಭರ್ಜರಿ ಉಡುಗೊರೆ ನೀಡಿದೆ.
ಜೈಶಂಕರ್ ಅವರು ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಅನುಭವದ ಜತೆಗೆ ದಕ್ಷತೆಯನ್ನು ಹೊಂದಿದ್ದಾರೆ. ಜೈಶಂಕರ್ ಹಾಲಿ ಅಧಿಕಾರದ ಅವಧಿ ಜೂ.31ಕ್ಕೆ ಕೊನೆಗೊಳ್ಳಬೇಕಿತ್ತು. ಜ.29ರಂದೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.