ಇಸ್ಲಾಮಾಬಾದ್ : 'ಪೇಶಾವರ'ದ ಶಾಲೆಯಲ್ಲಿ ಉಗ್ರರು ಮಾರಣಹೋಮ ನಡೆಸಿದ್ದರಿಂದ ಪಾಕಿಸ್ತಾನ ಶಾಲೆಗಳಲ್ಲಿ ಶಿಕ್ಷಕರೂ ಬಂದೂಕು ಹಿಡಿದು ಹೋಗುವ ಸೌಲಭ್ಯ ಕಲ್ಪಿಸಲಾಗಿದೆ.
ಪಾಕಿಸ್ತಾನದ ಅನೇಕ ಶಾಲೆಗಳಲ್ಲಿ ಶಿಕ್ಷಕರಿಗೆ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತಿದೆ. ಹಾಗೆಯೇ ತರಗತಿಗಳಿಗೆ ಬಂದೂಕುಗಳನ್ನು ಹಿಡಿದು ಹೋಗುವ ಅವಕಾಶ ಕಲ್ಪಿಸಲಾಗಿದೆ. ಉಗ್ರರ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಶಿಕ್ಷಕರಿಗೆ ಈ ಸೌಲಭ್ಯ ನೀಡಲಾಗಿದೆ.
ಕಳೆದ ತಿಂಗಳು ತೆಹ್ರೀಕ್-ಎ- ತಾಲೀಬಾನ್ ಉಗ್ರ ಸಂಘಟನೆ ಪೇಶಾವರದಲ್ಲಿ ಶಾಲೆ ಮೇಲೆ ದಾಳಿ ನಡೆಸಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸೇರಿ ಒಟ್ಟು 150 ಜನರ ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಶಿಕ್ಷಕರು ತಮ್ಮ ಹಾಗೂ ವಿದ್ಯಾರ್ಥಿಗಳ ರಕ್ಷಣೆಗಾಗಿ ತರಗತಿಗಳಿಗೆ ಬಂದೂಕುಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.
ಪ್ರತಿಯೊಬ್ಬ ಶಿಕ್ಷಕರೂ ತರಗತಿಗಳಿಗೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನಿರ್ಬಂಧವಿದೆ. ಆದರೆ ಯಾರು ತೆಗೆದುಕೊಂಡು ಹೋಗುತ್ತಾರೋ ಅವರಿಗೆ ಅನುಮತಿ ನೀಡಲಾಗುವುದು ಎಂದು ಪಾಕಿಸ್ತಾನದ ಖೈಬರ್ ಪಖ್ತೂಂಖ್ವಾದ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಶಿಕ್ಷಕರಿಗೆ ಎರಡು ದಿನಗಳ ಕಾಲ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಅತಿಫ್ ಖಾನ್ ತಿಳಿಸಿದ್ದಾರೆ.