ನವದೆಹಲಿ : 'ಬಿಜೆಪಿ' ವಿರುದ್ಧ ವಾಗ್ದಾಳಿ ನಡೆಸಿರುವ ಆಮ್ ಆದ್ಮಿ ಪಕ್ಷ, ಬಿಜೆಪಿಯನ್ನು ಭಾರತೀಯ ನೊಟೀಸ್ ಪಕ್ಷ ಎಂದು ಟೀಕಿಸಿದೆ.
ಓಟಿಗಾಗಿ ನೀಡುವ ಹಣವನ್ನು ತೆಗೆದುಕೊಂಡು ಎಎಪಿಗೇ ಮತ ಹಾಕಿ ಎಂದು ಅರವಿಂದ್ ಕೇಜ್ರಿವಾಲ್ ಮತ್ತೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ, ಅರವಿಂದ್ ಕೇಜ್ರಿವಾಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಮ್ ಅದ್ಮಿ ಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ಬಿಜೆಪಿ ಭಾರತೀಯ ನೊಟೀಸ್ ಪಾರ್ಟಿ ಎಂದು ಆಪ್ ಆಕ್ರೋಶ ವ್ಯಕ್ತಪಡಿಸಿದೆ.
ಚುನಾವಣಾ ಆಯೋಗ ನೀಡಿರುವ ಎಚ್ಚರಿಕೆಯ ಹೊರತಾಗಿಯೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಓಟಿಗಾಗಿ ನೀಡುವ ಹಣವನ್ನು ತೆಗೆದುಕೊಂಡು ಎಎಪಿಗೇ ಮತ ಹಾಕಿ ಎಂದು ಹೇಳಿದ್ದರು. ನಿಮ್ಮ ಓಟಿಗಾಗಿ ನೀಡುವ ನೋಟನ್ನು ತೆಗೆದುಕೊಳ್ಳಿ ಸಾರಾಯಿ, ಹೆಂಡವನ್ನು ಕೊಟ್ಟರೆ ಅದನ್ನು ತೆಗೆದುಕೊಳ್ಳಬೇಡಿ ಎಂದು ಕೇಜ್ರಿವಾಲ್ ಹೇಳಿದ್ದರು.