ಇಸ್ಲಾಮಾಬಾದ್ : 'ಅಮೆರಿಕ'ದ ಅಧ್ಯಕ್ಷ ಬರಾಕ್ ಒಬಾಮ ಅಮೆರಿಕಕ್ಕೆ ಭಾರತ ಬೆಸ್ಟ್ ಫ್ರೆಂಡ್ ಎಂದು ಘೋಷಿಸಿದ್ದರೆ, ಇತ್ತ ಭಾರತ-ಅಮೆರಿಕದ ನಡುವೆ ನಡೆದ ಅಣು ಒಪ್ಪಂದ ಮತ್ತು ದಕ್ಢಿಣ ಚೀನಾ ಸಮುದ್ರದ ವಿಚಾರದಲ್ಲಿ ಉಭಯ ದೇಶಗಳ ಮಾತುಕತೆ ಬಗ್ಗೆ ಕ್ಯಾತೆ ತೆಗೆದಿರುವ ಚೀನಾ, ಈಗ ಪಾಕಿಸ್ತಾನವನ್ನು ತನ್ನ ಸಾರ್ವಕಾಲಿಕ ಮಿತ್ರ ರಾಷ್ಟ್ರ ಎಂದು ಘೋಷಿಸಿದೆ.
ಚೀನಾದ ಪಾಲಿಟ್ ಬ್ಯೂರೋ ಸದಸ್ಯ(ಕಮ್ಯುನಿಸ್ಟ್ ಪಕ್ಷದ ಪ್ರಧಾನ ಸಮಿತಿ ಸದಸ್ಯ) ಮೆಂಗ್ ಜಿಯಾಂಜು, ಪಾಕಿಸ್ತಾನದ ಬಗ್ಗೆ ಮಾತನಾಡಿದ್ದು ಪಾಕಿಸ್ತಾನದ ಕಾಳಜಿಯೇ ಚೀನಾದ ಕಾಳಜಿ, ಪಾಕಿಸ್ತಾನ ಚೀನಾಗೆ ಸಾರ್ವಕಾಲಿಕ ಮಿತ್ರ ರಾಷ್ಟ್ರ ಎಂಬ ಹೇಳಿಕೆ ನೀಡಿದ್ದಾರೆ.
ಐ.ಎಸ್.ಪಿ.ಆರ್ ಟ್ವೀಟ್ ಪ್ರಕಾರ ಚೀನಾದ ಕಮ್ಯುನಿಷ್ಟ್ ಪಕ್ಷದ ಪ್ರಧಾನ ಸಮಿತಿ ಸದಸ್ಯ, ಪಾಕಿಸ್ತಾನದೊಂದಿಗೆ ತಮ್ಮ ರಾಷ್ಟ್ರದ ಸಂಬಂಧ ವ್ಯಕ್ತಿಗಳನ್ನೂ ಮೀರಿದ್ದು ಹಾಗೂ ಪಾಕಿಸ್ತಾನ ತನಗೆ ಅತ್ಯಂತ ವಿಶ್ವಾಸಾರ್ಹ ಸ್ನೇಹಿತ ಎಂದು ಹೇಳಿದ್ದಾರೆ.
ಪಾಕಿಸ್ತಾನ ಎಂದಿಗೂ ಚೀನಾಗೆ ಬೆಂಬಲ ನೀಡುತ್ತಿದೆ. ಅಂತೆಯೇ ಪಾಕಿಸ್ತಾನಕ್ಕೂ ಚೀನಾ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಮೆಂಗ್ ತಿಳಿಸಿದ್ದಾರೆ. ಪಾಕಿಸ್ತಾನ ಹಾಗೂ ಚೀನಾ ನಡುವೆ ರಕ್ಷಣಾ ಸಹಯೋಗ ವೃದ್ಧಿ, ಭದ್ರತೆ, ಗುಪ್ತಚರ ಹಂಚಿಕೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.