ನವದೆಹಲಿ : 'ದೆಹಲಿ'ಯಲ್ಲಿ ಹವಾಮಾನ ವೈಪರಿತ್ಯ ಉಂಟಾಗಿರುವ ಕಾರಣದಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ನಡೆಯುವ ಕಾರ್ಯಕ್ರಮವಾದ ವಾಯುಪಡೆಯ ಪ್ರದರ್ಶನ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರು ಈಬಾರಿಯ ಗಣರಾಜ್ಯೋತ್ಸವದ ಅತಿಥಿಯಾಗಿದ್ದು, ಎಂದಿನ ಗಣರಾಜ್ಯೋತ್ಸವ ದಿನಾಚರಣೆಗಿಂತಲೂ ಈ ಬಾರಿಯದ್ದು ವಿಶೇಷವಾಗಿದೆ.
ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿರುವ ಪರೇಡ್ ಕಾರ್ಯಕ್ರಮದಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ಆಗಮಿಸಲಿದ್ದಾರೆ. ಮಾವೋವಾದಿಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಕಪ್ಪು ಬಣ್ಣದ ಟೋಪಿ, ಮಫ್ಲರ್ ಧರಿಸಿರುವವರನ್ನು ತಪಾಸಣೆ ನಡೆಸಲು ದೆಹಲಿ ಪೊಲೀಸರಿಗೆ ಸೂಚಿಸಲಾಗಿದೆ. ಬರಾಕ್ ಒಬಾಮ ಅವರ ಭದ್ರತೆಗಾಗಿ 500 ಅಮೇರಿಕಾದ ಸೀಕ್ರೆಟ್ ಸರ್ವಿಸ್ ಏಜೆಂಟ್ಸ್ ನಿಯೋಜಿಸಲಾಗಿದ್ದು ಇದೇ ಪ್ರಥಮ ಬಾರಿಗೆ ಅಮೆರಿಕಾ ಅಧ್ಯಕ್ಷರು 45 ನಿಮಿಷಕ್ಕೂ ಹೆಚ್ಚು ಕಾಲ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾರೆ.
ದೆಹಲಿಯಲ್ಲಿ ವಾತಾವರಣ ವೈಪರಿತ್ಯ ಗೊಂಡಿದ್ದು ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಾಯುಪಡೆಯ ಪ್ರದರ್ಶನ ಸ್ಥಗಿತಗೊಂಡರೆ ಸಾರ್ವಜನಿಕರಿಗೆ ನಿರಾಶೆಯಾಗಲಿದೆ.