ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಭೇಟಿ ವೇಳೆ ನಿಮ್ಮ ನೆಲದಿಂದ ಭಯೋತ್ಪಾದಕ ಕೃತ್ಯ ನಡೆಯದಂತೆ ನೋಡಿಕೊಳ್ಳಿ. ಒಂದು ವೇಳೆ ನಡೆದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಅಮೆರಿಕ ಖಡಕ್ ಎಚ್ಚರಿಕೆ ನೀಡಿದೆ.
ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಒಬಾಮಾ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ 200ಕ್ಕೂ ಹೆಚ್ಚು ಉಗ್ರರು ಭಾರತದೊಳಕ್ಕೆ ನುಸುಳಿ, ವಿಧ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಪಾಕಿಸ್ತಾನಕ್ಕೆ ಅಮೆರಿಕ ಈ ರೀತಿಯ ಖಡಕ್ ಎಚ್ಚರಿಕೆ ನೀಡಿದೆ. ತನ್ಮೂಲಕ ಪರೋಕ್ಷವಾಗಿ ಪಾಕಿಸ್ತಾನ ಭಯೋತ್ಪಾದನೆಯಲ್ಲಿ ತೊಡಗಿದೆ ಎಂಬುದನ್ನು ದೃಢೀಕರಿಸಿದೆ.
ಒಬಾಮಾ ಭಾರತದಲ್ಲಿರುವಾಗ ಗಡಿಯಾಚೆಯಿಂದ ಭಯೋತ್ಪಾದನೆ ಕೃತ್ಯ ಅಥವಾ ಯತ್ನ ನಡೆಯಕೂಡದು. ಒಂದು ವೇಳೆ ನಡೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಅಮೆರಿಕ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಈ ಎಚ್ಚರಿಕೆಯ ಜತೆಯಲ್ಲೇ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಸಂಘಟನೆಗಳ ಚಲನವಲನಗಳ ಮೇಲೆ ಆಫ್ಘಾನಿಸ್ತಾನದಲ್ಲಿರುವ ತನ್ನ ಪಡೆಗಳ ಮೂಲಕ ಅಮೆರಿಕ ಹದ್ದಿನಗಣ್ಣಿರಿಸಿದೆ. ಅಲ್ಲದೆ ಪಾಕಿಸ್ತಾನದಲ್ಲಿನ ಅಮೆರಿಕ ರಾಯಭಾರ ಕಚೇರಿಗೂ ಕಟ್ಟೆಚ್ಚರ ಸಾರಿದೆ.
ಅಮೆರಿಕ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದಾಗ ಕೆಲವೊಮ್ಮೆ ಭಾರತದಲ್ಲಿ ಭಯೋತ್ಪಾದನೆ ಕೃತ್ಯಗಳು ನಡೆದಿರುವ ಉದಾಹರಣೆಗಳಿವೆ. ಈ ಹಿಂದೆ 2000ನೇ ಇಸ್ವಿಯಲ್ಲಿ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಭಾರತಕ್ಕೆ ಭೇಟಿ ನೀಡುವ ಕೆಲ ದಿನಗಳ ಮುನ್ನ ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ 36 ಸಿಖ್ಖರನ್ನು ಉಗ್ರಗಾಮಿಗಳು ಗುಂಡಿಟ್ಟು ಕೊಂದಿದ್ದರು.
ಅಮೆರಿಕ ಅಧ್ಯಕ್ಷರೊಬ್ಬರು ಇದೇ ಮೊದಲ ಬಾರಿಗೆ ಭಾರತದ ಗಣರಾಜ್ಯೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ ಒಬಾಮಾ ಅವರು ಬರೋಬ್ಬರಿ 2 ತಾಸುಗಳ ಕಾಲ ಬಯಲಲ್ಲಿ ಕುಳಿತು ಗಣರಾಜ್ಯೋತ್ಸವ ಕಾರ್ಯಕ್ರಮಗಳನ್ನು ವೀಕ್ಷಿಸಲಿದ್ದಾರೆ. ಈ ರೀತಿ ಅಮೆರಿಕ ಅಧ್ಯಕ್ಷರು ಎರಡು ತಾಸು ಅವಧಿಯನ್ನು ಬಯಲಲ್ಲಿ ಕಳೆಯುತ್ತಿರುವುದು ಇದೇ ಮೊದಲಾಗಿರುವುದರಿಂದ ಭಾರತ ಹಾಗೂ ಅಮೆರಿಕ ಭದ್ರತಾ ಪಡೆಗಳು ಬಿಗಿ ಭದ್ರತೆ ಒದಗಿಸಲು ಮುಂದಾಗಿವೆ.