ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ 6 ತಿಂಗಳಲ್ಲಿ ಈವರೆಗೂ 12 ಕೇಂದ್ರ ಸಚಿವರು ಸಲ್ಲಿಸಿದ್ದ 21 ವಿದೇಶ ಪ್ರವಾಸದ ಪ್ರಸ್ತಾವನೆಯನ್ನು ಪ್ರಧಾನಿ ಕಾರ್ಯಾಲಯ ತಿರಸ್ಕರಿಸಿದೆ.
ಮಾಧ್ಯಮ ವರದಿ ಪ್ರಕಾರ, ಪ್ರಧಾನಿ ಕಾರ್ಯಾಲಯ 9 ಅರ್ಜಿಗಳನ್ನು ತಿರಸ್ಕರಿಸಿದ್ದರೆ, 8 ಅರ್ಜಿಗಳನ್ನು ಇಲಾಖೆಗಳಿಗೆ ಸಂಬಂಧಿಸಿದ ಸಚಿವರೇ ಹಿಂಪಡೆದಿದ್ದಾರೆ. ಉಳಿದ ಅರ್ಜಿಗಳನ್ನು ವಿದೇಶ ಪ್ರವಾಸ ಕೈಗೊಳ್ಳುವ ಅಂತಿಮ ಹಂತದಲ್ಲಿ ತಿರಸ್ಕರಿಸಲಾಗಿದೆ.
ಮೇ.26ರಿಂದ ಡಿ.26ರವರೆಗೆ ವಿದೇಶ ಪ್ರವಾಸ ಕೈಗೊಳ್ಳಲು ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಖಾಸಗಿ ಪ್ರವಾಸ ಕೈಗೊಳ್ಳುವ ಅರ್ಜಿಗಳೂ ಕಂಡುಬಂದಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಇದಕ್ಕೂ ಮೊದಲು 88 ಪ್ರಸ್ತಾವನೆಗಳನ್ನು ಪ್ರಧಾನಿ ಕಾರ್ಯಾಲಯ ತಲುಪುವ ಮುನ್ನವೇ ವಿದೇಶಾಂಗ ಇಲಾಖೆ ಇತ್ಯರ್ಥಗೊಳಿಸಿದೆ. ಕೇಂದ್ರ ಸಚಿವರ ವಿದೇಶ ಪ್ರವಾಸಕ್ಕೆ ಪ್ರಧಾನಿಯೇ ಅಂತಿಮವಾಗಿ ಅನುಮತಿ ನೀಡಬೇಕಾಗುತ್ತದೆ.
ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಜುಲೈ ನಲ್ಲಿ ಯು.ಕೆ ಮತ್ತು ಹಾಲೆಂಡ್ ಪ್ರವಾಸ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದ್ದರು, ತಮ್ಮ ಪ್ರವಾಸದ ವೇಳೆ ಜಲಮಾರ್ಗ, ಚಾಲಕ ತರಬೇತಿ ಮತ್ತು ಪರವಾನಗಿ ಬಗ್ಗೆ ಅಧ್ಯಯನ ನಡೆಸುವುದಾಗಿ ಕಾರಣ ನೀಡಿದ್ದರು. ಆದರೆ ನಿತಿನ್ ಗಡ್ಕರಿ ಅವರ ಪ್ರಸ್ತಾವನೆಯನ್ನು ಪ್ರಧಾನಿ ಕಾರ್ಯಾಲಯ ತಿರಸ್ಕರಿಸಿದೆ. ನಿತಿನ್ ಗಡ್ಕರಿ ಅವರಲ್ಲದೆ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ವಿ.ಕೆ ಸಿಂಗ್ ಅವರ ಅರ್ಜಿಯೂ ತಿರಸ್ಕೃತಗೊಂಡಿವೆ.