ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕ್ ಇನ್ ಇಂಡಿಯಾಕ್ಕೆ ಜಾಗತಿಕ ಬಂಡವಾಳವನ್ನು ಆಕರ್ಷಿಸಲು ಕೇಂದ್ರ ಸರ್ಕಾರ ಮೊದಲ ಬಾರಿಗೆ ಬಂಡವಾಳ ಹೂಡಿಕೆದಾರರ ಬೃಹತ್ ಸಮಾವೇಶವನ್ನು ಫೆಬ್ರವರಿ ತಿಂಗಳಲ್ಲಿ ಆಯೋಜಿಸಲಿದೆ.
ಜಗತ್ತಿನ ಅತಿದೊಡ್ಡ ಬಂಡವಾಳ ನಿರ್ವಹಣಾ ಕಂಪನಿ ಬ್ಲ್ಯಾಕ್ರಾಕ್ಗೆ ಸಮ್ಮೇಳನದ ಹೊಣೆ ವಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆ. 3ರಂದು ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡುವ ನಿರೀಕ್ಷೆ ಇದೆ.
ಸಮಾವೇಶದಲ್ಲಿ ಬಂಡವಾಳ ನಿರ್ವಹಣೆಗಾರರು, ಸರ್ಕಾರಿ ಅಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳ ನಡುವೆ ದುಂಡು ಮೇಜಿನ ಚರ್ಚೆ ನಡೆಯಲಿದೆ. ಭಾರತದಲ್ಲಿ ಬಂಡವಾಳ ಸ್ನೇಹಿ ವಾತಾವರಣವನ್ನು ನಿರ್ಮಿಸುವುದು ಮತ್ತು ವಿದೇಶಿ ಬಂಡವಾಳ ಹೂಡಿಕೆ ದಾರರು ಭಾರತ ದತ್ತ ಆಕರ್ಷಿತರಾಗುವಂತೆ ಮಾಡುವುದು ಸಮಾವೇಶ ಆಯೋಜನೆಯ ಮುಖ್ಯ ಉದ್ದೇಶವಾಗಿದೆ.
ಭಾರತದಲ್ಲೇ ವಸ್ತುಗಳನ್ನು ಉತ್ಪಾದಿಸುವ ದೃಷ್ಟಿಯಿಂದ ನರೇಂದ್ರ ಮೋದಿ ಅವರು ಕಳೆದ ಸೆಪ್ಟೆಂಬರ್ನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಗೆ ಚಾಲನೆ ನೀಡಿದ್ದರು.