ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದು, ಬಿಜೆಪಿ ಕಛೇರಿಯಲ್ಲಿ ಅವರನ್ನು ಅದ್ದೂರಿಯಾಗಿ ಬರ ಮಾಡಿಕೊಂಡ ರಾಜ್ಯ ಬಿಜೆಪಿ ನಾಯಕರು, ನಾದಸ್ವರ ಮೂಲಕ ಪೂರ್ಣಕುಂಭ ಸ್ವಾಗತಕೋರಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಮೊದಲ ಬಾರಿಗೆ ಅಮಿತ್ ಶಾ ಪಾಲ್ಗೊಳ್ಳುತ್ತಿದ್ದು, ಬೆಂಗಳೂರಿನ ಬಿಜೆಪಿ ಕಛೇರಿಯಲಿ ಈಗಾಗಲೇ ಸಭೆ ಆರಂಭವಾಗಿದೆ.
ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಅನಂತ್ ಕುಮಾರ್, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್, ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು ಪಾಲ್ಗೊಂಡಿದ್ದಾರೆ.
ರಾಜ್ಯ ಸರ್ಕಾರದ ವೈಫಲ್ಯ, ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಸದಸ್ಯತ್ವ ಅಭಿಯಾನವನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆಗಳು ನಡೆಯಲಿವೆ. ಜತೆಗೆ ರಾಜ್ಯ ಬಿಜೆಪಿಗೆ ಚುರುಕು ಮುಟ್ಟಿಸುವ ಕೆಲಸವನ್ನು ಶಾ ಮಾಡಲಿದ್ದಾರೆ.
ಕೋರ್ ಕಮಿಟಿ ಸಭೆ ಬಳಿಕ ರಾಜ್ಯದ ಎಲ್ಲ ಸಂಸದರು, ಶಾಸಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಭೋಜನದ ಬಳಿಕ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸದಸ್ಯತ್ವ ಅಭಿಯಾನದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಪ್ರತಿಯೊಂದು ಜಿಲ್ಲೆಯಲ್ಲಿ ಅಭಿಯಾನ ಹೇಗೆ ನಡೆಯುತ್ತಿದೆ ಎನ್ನುವುದನ್ನು ಶಾ ಅವರು ಖುದ್ದಾಗಿ ಗಮನಿಸಲಿದ್ದಾರೆ. ಜಿಲ್ಲಾ ಪದಾಧಿಕಾರಿಗಳೊಂದಿಗೆ ಚರ್ಚಿಸುವುದರ ಜತೆಗೆ ಕೆಲ ಸಲಹೆಗಳನ್ನು ನೀಡಲಿದ್ದಾರೆ.