ನವದೆಹಲಿ : ಪೆಟ್ರೋಲ್,ಡಿಸೇಲ್ ದರ ಇಳಿಕೆಯ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ನಿರಾಸೆಯಾಗಿದೆ. ಜ.1ರಂದು ಪೆಟ್ರೋಲ್, ಡಿಸೇಲ್ ದರ ಇಳಿಕೆಯಾಗುವ ಸಂಭವವಿತ್ತು. ಆದರೆ ಅಬಕಾರಿ ಸುಂಕ ಏರಿಕೆಯಾಗಿರುವುದರಿಂದ ಬೆಲೆ ಇಳಿಕೆಗೆ ಕತ್ತರಿ ಬಿದ್ದಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿರುವ ಪರಿಣಾಮ ಬೆಲೆ ಇಳಿಕೆಯಾಗಿಲ್ಲ.ಹಾಗೆಯೇ ಅಬಕಾರಿ ಸುಂಕ ಹೆಚ್ಚಳ ಗ್ರಾಹಕರ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ.
ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರು. ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಸತತ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಆದಾಯ ಸಂಗ್ರಹದ ಗುರಿಯನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಆದರೆ, ಈ ಸುಂಕ ಹೆಚ್ಚಳದ ಬಿಸಿ ಗ್ರಾಹಕರ ಮೇಲೆ ಬೀಳುವುದಿಲ್ಲ ಎನ್ನುವುದೇ ಸಂತಸದ ವಿಷಯ.
ಈ ಹೊಸ ಸುಂಕ ಪರಿಷ್ಕರಣೆ ಗುರುವಾರ ಮಧ್ಯರಾತ್ರಿಯಿಂದಲೇ ಅನುಷ್ಠಾನಕ್ಕೆ ಬಂದಿದೆ. ಡಿಸೆಂಬರ್ 3 ರಂದು ಪೆಟ್ರೋಲ್ ರು.2.25 ಮತ್ತು ಡೀಸೆಲ್ ಅಬಕಾರಿ ಸುಂಕವನ್ನು ರು. 1ರಷ್ಟು ಹೆಚ್ಚಿಸಿತ್ತು. ಅಲ್ಲದೆ ಡಿ.12 ರಂದು ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ರು.1.50 ರಷ್ಟು ಹೆಚ್ಚಿಸಿತ್ತು. ಇದೀಗ ಸುಂಕ ಹೆಚ್ಚಿಸುತ್ತಿರುವುದು ಇದು ಮೂರನೇ ಬಾರಿ.