ನವದೆಹಲಿ : ಕೇಂದ್ರ ಸರ್ಕಾರ ಯೋಜನಾ ಆಯೋಗಕ್ಕೆ 'ನೀತಿ ಆಯೋಗ'ವೆಂದು ಮರುನಾಮಕರಣ ಮಾಡಲಿದೆ.
ಈ ಬಗ್ಗೆ ಜ.1ರಂದು ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ. ಆ.15, ಸ್ವಾತಂತ್ರ್ಯದಿನಾಚರಣೆಯಂದು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಯೋಜನಾ ಆಯೋಗದ ಬದಲಿಗೆ ನೂತನ ಆಯೋಗವನ್ನು ಜಾರಿಗೆ ತರುವುದಾಗಿ ತಿಳಿಸಿದ್ದರು.
60 ವರ್ಷಗಳಷ್ಟು ಹಳೆಯದಾದ ಯೋಜನಾ ಆಯೋಗ ವ್ಯವಸ್ಥೆಯ ಬದಲಾಗಿ ಹೊಸದೊಂದು ಸಂಸ್ಥೆಯನ್ನು ರಚಿಸುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದರು.
ಸಭೆಯಲ್ಲಿ ಯೋಜನಾ ಆಯೋಗವನ್ನು ಪುನಾರಚಿಸುವ ಕುರಿತು ಬಹುತೇಕ ಮುಖ್ಯಮಂತ್ರಿಗಳು ಸಹಮತ ವ್ಯಕ್ತಪಡಿಸಿದ್ದರಾದರೂ ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು, ಯೋಜನಾ ಆಯೋಗವನ್ನು ಹಾಲಿ ಸ್ವರೂಪದಿಂದ ಪೂರ್ಣ ರೀತಿಯಲ್ಲಿ ವಿಸರ್ಜನೆಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಆಯೋಗದ ರೂಪುರೇಷೆ ಸೋವಿಯತ್ ಮಾದರಿಯಲ್ಲಿರುವುದು ಪ್ರಸಕ್ತ ಆರ್ಥಿಕ ಸ್ಥಿತಿಗೆ ತಕ್ಕನಾಗಿಲ್ಲ. ತನ್ನ ನೀತಿಗಳನ್ನು ಅದು ವಿವಿಧ ರಾಜ್ಯಗಳ ಮೇಲೆ ಹೇರುತ್ತದೆ ಎಂಬುದು ಮೋದಿ ಪ್ರತಿಪಾದನೆ. ಹೀಗಾಗಿ, ರಾಜ್ಯಗಳ ಪಾಲೂ ಇರುವಂತೆ ಹೊಸ ಸಂಸ್ಥೆ ಕಟ್ಟುವುದು ಮೋದಿ ಅವರ ಚಿಂತನೆಯಾಗಿದೆ.