ನವದೆಹಲಿ : ಇಪ್ಪತ್ತು ವರ್ಷಗಳ ಬಳಿಕ ಮತ್ತೆ 1 ರೂಪಾಯಿ ನೋಟು ಮಾರುಕಟ್ಟೆಗೆ ಬರಲಿದೆ. ಈ ಕುರಿತು ಕೇಂದ್ರ ಹಣಕಾಸು ಇಲಾಖೆ ಅಧಿಸೂಚನೆ ನೀಡಿದೆ.
ಪ್ರಸ್ತುತ ಚಿಲ್ಲರೆ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ 1, 2, 5 ಹಾಗೂ 10 ರೂ.ಗಳ ನಾಣ್ಯಗಳನ್ನು ಹೆಚ್ಚಾಗಿ ಮುದ್ರಿಸುತ್ತಿತ್ತು. ಆದರೆ, ಸಾಗಣೆ ಮತ್ತು ಉತ್ಪಾದನೆಯಲ್ಲಿ ಹೆಚ್ಚು ವೆಚ್ಚವಾಗುತ್ತದೆ ಎಂಬ ದೃಷ್ಟಿಯಿಂದ 1 ರೂ. ನೋಟನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.
ಆದರೆ, ಹಿಂದೆ ಇದ್ದಂತಹ ನೋಟಿಗೂ ಈಗ ಹೊರ ತರುತ್ತಿರುವ ನೋಟಿಗೂ ತುಂಬಾ ವ್ಯತ್ಯಾಸವಿರುತ್ತದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಆರ್ಥಿಕ ಇಲಾಖೆ ಅಧಿಸೂಚನೆ ಪ್ರಕಾರ, ಈ ಹೊಸ ನೋಟಿನ ಮುಂಭಾಗ ಗುಲಾಬಿ ಮತ್ತು ಹಸಿರು ಬಣ್ಣಗಳಿಂದ ಕೂಡಿದ ಆಕೃತಿಗಳಿರುತ್ತವೆ. ಹಿಂಬದಿಯಲ್ಲಿ ಹಲವಾರು ಬಣ್ಣಗಳಿಂದ ಕೂಡಿದ ಅಕ್ಷರಗಳು ಗೋಚರಿಸಲಿವೆ ಎಂದು ತಿಳಿದುಬಂದಿದೆ.
ಆರ್ ಬಿಐಗೆ ಎರಡು, ಐದು, ಹತ್ತು, ಇಪ್ಪತ್ತು, ಐವತ್ತು, ನೂರು, ಐನೂರು, ಸಾವಿರ, ಐದು ಸಾವಿರ ಮತ್ತು ಹತ್ತು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಣ ಮಾಡುವ ಅಧಿಕಾರವಿದೆ. ಆದರೆ, ಒಂದು ರೂ. ನೋಟನ್ನು ಕೇಂದ್ರ ಸರ್ಕಾರದ ಸೂಚನೆಯಂತೆ ಮುದ್ರಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಈ ನೋಟಿನಲ್ಲಿ ಗೌರ್ನಮೆಂಟ್ ಆಫ್ ಇಂಡಿಯಾ ಆಂಗ್ಲ ಅಕ್ಷರದ ಮೇಲೆ ಭಾರತ ಸರ್ಕಾರ ಎಂಬ ಅಕ್ಷರಗಳಿರುತ್ತವೆ. 2015ಕ್ಕೆ ಈ ಹೊಸ ನೋಟು ಮಾರುಕಟ್ಟೆಗೆ ಬರಲಿದೆ. ಇದೇ ವೇಳೆ 1 ರೂ. ನಾಣ್ಯ ಕೂಡ ಹೊಸ ಲಾಂಛನದಲ್ಲಿ ಮುದ್ರಣಗೊಳ್ಳಲಿದೆ.