ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಬನಾರಸ್ ವಿವಿ ಸ್ಥಾಪಕ ಮದನ್ ಮೋಹನ್ ಮಾಳವೀಯ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿರುವುದಕ್ಕೆ ದೇಶಾದ್ಯಂತ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತವಾಗಿದ್ದರೆ ರಾಜ್ಯದ ಸಮಾಜಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ವಾಜಪೇಯಿ ಹಾಗೂ ಮದನ್ ಮೋಹನ್ ಮಾಳವೀಯಾ ಅವರಿಗೆ ಭಾರತ ರತ್ನ ನೀಡಿರುವುದಕ್ಕೆ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿರುವ ಹೆಚ್.ಆಂಜನೇಯ, ಬಿಜೆಪಿ ಸರ್ಕಾರ ಮುಂದೊಂದು ದಿನ ನಾಥೂರಾಮ್ ಗೋಡ್ಸೆಗೆ ಭಾರತ ರತ್ನ ನೀಡಿದರೂ ಅಚ್ಚರಿಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇನ್ನು ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆಯೂ ಪ್ರತಿಕ್ರಿಯಿಸಿರುವ, ಸೂರ್ಯ ಚಂದ್ರ ಇರುವವರೆಗೆ ಕಾಂಗ್ರೆಸ್ ಇರುತ್ತದೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಬಿಜೆಪಿಯನ್ನು ನಾಶ ಮಾಡುವುದು ನಮಗೆ ಸಾಧ್ಯವಿದೆ ಎಂದು ಹೇಳಿದ್ದಾರೆ.
ಒಟ್ಟಾರೆ ಅಟಲ್ ಬಿಹಾರಿ ವಾಜಪೇಯಿ ಹಾಗೂ ಬನಾರಸ್ ವಿವಿ ಸ್ಥಾಪಕ ಮದನ್ ಮೋಹನ್ ಮಾಳವೀಯ ಅವರಿಗೆ ಭಾರತ ರತ್ನ ದೊರೆತಿರುವುದಕ್ಕೆ ದೇಶಾದ್ಯಂತ ಸಂತಸ ವ್ಯಕ್ತವಾಗಿದ್ದರೆ, ಆಂಜನೇಯ ಅವರು ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.