ವಾಷಿಂಗ್ ಟನ್ : ಭಾರತದಲ್ಲಿ ನಡೆಯುತ್ತಿರುವ ಸಾಮೂಹಿಕ ಮತಾಂತರದ ವಿಷಯವನ್ನು ಗಮನಿಸುತ್ತಿರುವುದಾಗಿ ಅಮೆರಿಕಾ ತಿಳಿಸಿದೆ.
ಭಾರತದಲ್ಲಿ ಸಾಮೂಹಿಕ ಮರುಮತಾಂತರದ ವರದಿಗಳ ಬಗ್ಗೆ ಅರಿವಿದೆ. ಇಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಅಮೆರಿಕಾ ವಿದೇಶಾಂಗ ಇಲಾಖೆ ವಕ್ತಾರರೊಬ್ಬರು ಹೇಳಿಕೆ ನೀಡಿದ್ದಾರೆ.
ಜಗತ್ತಿನ ಎಲ್ಲಾ ದೇಶಗಳಲ್ಲಿರುವ ಧರ್ಮ ಮತ್ತು ನಂಬಿಕೆ ಬಗೆಗಿನ ಸ್ವಾತಂತ್ರ್ಯವನ್ನು ನಾವು ಗೌರವಿಸುತ್ತೇವೆ ಎಂದಿರುವ ಅಮೆರಿಕಾ, ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ ಧಾರ್ಮಿಕ ಸ್ವಾತಂತ್ರ್ಯ ರಕ್ಷಿಸಲು ತಮ್ಮ ಕಟ್ಟುಪಾಡುಗಳನ್ನು ಅನುಸರಿಸಲು ಎಲ್ಲಾ ದೇಶಗಳಿಗೂ ಕರೆ ನೀಡಿದೆ. ಭಾರತದಲ್ಲಿ ನಡೆಯುತ್ತಿರುವ ಮರು ಮತಾಂತರದ ವಿಷಯದಲ್ಲಿ ಅಮೆರಿಕಾ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.
ಹಿಂದೂ ಸಂಘಟನೆಗಳು ಅಮಾಯಕ ಮುಸ್ಲಿಮರಿಗೆ ಆಮಿಷವೊಡ್ಡಿ ಹಿಂದೂ ಧರ್ಮಕ್ಕೆ ಮರುಮತಾಂತರ ನಡೆಸುತ್ತಿವೆ ಎಂದು ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಉತ್ತರ ಪ್ರದೇಶದಲ್ಲಿ ನಡೆದಿದ್ದ ಮರುಮತಾಂತರ ಕಾರ್ಯಕ್ರಮದ ಬಗ್ಗೆ ದೇಶಾದ್ಯಂತ ಚರ್ಚೆ ನಡೆದಿತ್ತು.