ವಾಷಿಂಗ್ ಟನ್ : 'ಕಪ್ಪು ಹಣ'ದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೆ ಅಂತಾರಾಷ್ಟ್ರೀಯ ಚಿಂತಕರ ತಂಡವೊಂದು ಭಾರತದ ಕಪ್ಪು ಹಣದ ಬಗ್ಗೆ ಕುತೂಹಲಕಾರಿ ಮಾಹಿತಿ ಬಹಿರಂಗಗೊಳಿಸಿದ್ದಾರೆ.
ವಿದೇಶಗಳಲ್ಲಿ ಕಪ್ಪು ಹಣ ಇಡುವ ದೇಶಗಳ ಪೈಕಿ ಭಾರತ ಜಾಗತಿಕ ಮಟ್ಟದಲ್ಲಿ 3ನೇ ಸ್ಥಾನ ಪಡೆದಿದೆ ಎಂದು ಅಂತಾರಾಷ್ಟ್ರೀಯ ಚಿಂತಕರು ಹೇಳಿದ್ದಾರೆ. 2003ರಿಂದ 2012 ರವರೆಗೆ ಭಾರತದಿಂದ ವಿದೇಶೀ ಬ್ಯಾಂಕ್‌ಗಳಲ್ಲಿ ಹೂಡಿಕೆಯಾದ ಮೊತ್ತದ ಪ್ರಮಾಣ ಸುಮಾರು 94.76 ಬಿಲಿಯನ್ ಡಾಲರ್ ಗಳಾಗಿದೆ ಎಂದು ಅಂದಾಜಿಸಲಾಗಿದ್ದು ಅತೀ ಹೆಚ್ಚು ಕಪ್ಪು ಹಣ ಇಟ್ಟಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ದೇಶವಾಗಿ ಹೊರಹೊಮ್ಮಿದೆ.
ವಿದೇಶಗಳಲ್ಲಿ ಕಪ್ಪುಹಣ ಇಡುವ ಬಗ್ಗೆ ಜಾಗತಿಕ ಆರ್ಥಿಕ ಸಮಗ್ರತೆ ಸಂಸ್ಥೆ ಅಧ್ಯಯನ ನಡೆಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಭಾರತದಿಂದ ವಿದೇಶಿ ಬ್ಯಾಂಕುಗಳಿಗೆ ರಫ್ತಾದ ಒಟ್ಟಾರೆ ಹಣಕ್ಕಿಂತ 2003-2012ರ ಅವಧಿಯಲ್ಲಿ ಶೇ.10 ರಷ್ಟು ಹೆಚ್ಚು ಹಣ ರಫ್ತಾಗಿದೆ ಎಂದು ತಿಳಿದುಬಂದಿದೆ. ಈ ಅವಧಿಯಲ್ಲಿ ವಿದೇಶಿ ಬ್ಯಾಂಕುಗಳಿಗೆ ಭಾರತದಿಂದ ಸುಮಾರು 6 ಲಕ್ಷ ಕೋಟಿ ಹಣ ರಫ್ತಾಗಿತ್ತು ಎಂದು ತಜ್ನರು ಅಭಿಪ್ರಾಯಪಟ್ಟಿದ್ದಾರೆ.
ವಿದೇಶದಲ್ಲಿ ಕಪ್ಪು ಹಣ ಇಡುವ ವಿಚಾರದಲ್ಲಿ ಭಾರತಕ್ಕೆ ಮೂರನೇ ಸ್ಥಾನ ದೊರೆತಿದ್ದರೆ ರಷ್ಯಾ ಮೊದಲನೇ ಸ್ಥಾನ ಹಾಗೂ ಚೀನಾ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಅಂತಾರಾಷ್ಟ್ರೀಯ ಚಿಂತಕರು ನಡೆಸಿರುವ ಅಧ್ಯಯನ ಭಾರತ ನಡೆಸುತ್ತಿರುವ ಕಪ್ಪು ಹಣದ ತನಿಖೆಗೆ ಉಪಯೋಗವಾಗುವ ಸಾಧ್ಯತೆ ಇದೆ