ಪೇಷಾವರ್ : 'ಪಾಕಿಸ್ತಾನ'ದಲ್ಲಿ ಉಗ್ರರು ನಡೆಸಿರುವ ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾಗಿರುವವರ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.
ಸೇನಾ ಶಾಲೆಯನ್ನು ಗುರಿಯಾಗಿಸಿಕೊಂಡು ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಘಟನೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ 110ಕ್ಕೆ ಏರಿಕೆಯಾಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಸೇನಾ ಸಮವಸ್ತ್ರದಲ್ಲಿ ಶಾಲೆಯೊಳಗೆ ನುಗ್ಗಿರುವ ಉಗ್ರರು 500ಕ್ಕೂ ಹೆಚ್ಚು ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಶಾಲೆಯ ಮೇಲೆ ದಾಳಿ ನಡೆಸಿರುವ ಉಗ್ರರು ಅರೆಬಿಕ್ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ವಿದ್ಯಾರ್ಥಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಓರ್ವ ಉಗ್ರ ಪ್ರಾಂಶುಪಾಲರ ಕೊಠಡಿಯಲ್ಲಿ ಅಡಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪಾಕಿಸ್ತಾನ ಸೇನಾ ದಾಳಿಗೆ ಪ್ರತಿಕಾರವಾಗಿ ಈ ದಾಳಿ ನಡೆಸಿದ್ದೇವೆ. ಹಿರಿಯ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಲು ಸೂಚನೆ ನೀಡಲಾಗಿದ್ದು, ಸಣ್ಣ ಮಕ್ಕಳ ಮೇಲೆ ದಾಳಿ ಮಾಡದಂತೆಯೂ ಸೂಚನೆ ನೀಡಲಾಗಿದೆ ಎಂದು ದಾಳಿಯ ಹೊಣೆ ಹೊತ್ತಿರುವ ತೆಹ್ರಿಕ್-ಇ-ತಾಲಿಬಾನ್ ಉಗ್ರ ಸಂಘಟನೆ ಸ್ಪಷ್ಟನೆ ನೀಡಿದೆ.
ಈ ಹಿಂದೆ ಪಾಕ್ ಸೇನೆ ವಜಿರಿಸ್ತಾನದ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 179 ಮಂದಿ ತಾಲಿಬಾ ಉಗ್ರರು ಸಾವನ್ನಪ್ಪಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಶಾಲೆಯ ಮೇಲೆ ಆತ್ಮಾಹುತಿ ದಾಳಿ ನಡೆಸಲಾಗಿದೆ. ದಾಳಿ ನಡೆದಿರುವ ಖೈಬರ್ ಪಖ್ತೂನ್ ನಲ್ಲಿ ಮೂರು ದಿನ ಶೋಕಾಚರಣೆಗೆ ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.