BW News Bureau : 'ಆಸ್ಟ್ರೇಲಿಯಾ'ದಲ್ಲಿ ಐ.ಎಸ್.ಐ.ಎಸ್ ಉಗ್ರರು ಕಫೆಯೊಂದರಲ್ಲಿ ದಾಳಿ ನಡೆಸಿರುವ ಬೆನ್ನಲ್ಲೇ ಐಸೀಸ್ ಸಂಘಟನೆಯ ಮೀಡಿಯಾ ಅಕೌಂಟ್ ನಿಂದ ಬೆಂಗಳೂರು ಪೊಲೀಸರಿಗೂ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದು ಡಿ.16ರಂದು ಬೆಂಗಳೂರಿನಲ್ಲೂ ಆಸ್ಟ್ರೇಲಿಯಾ ಮಾದರಿಯ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಡಿ.15ರ ಮಧ್ಯಾಹ್ನ ಐ.ಎಸ್.ಐ.ಎಸ್ ಉಗ್ರ ಸಂಘಟನೆಯವರು ಟ್ವಿಟರ್ ಮೂಲಕ ಎಚ್ಚರಿಕೆ ನೀಡಿದ್ದು, ಆಸ್ಟ್ರೇಲಿಯಾ ಪ್ರಕರಣ ಕೇವಲ ಆರಂಭವಷ್ಟೇ. ಬೆಂಗಳೂರು ನಾಗರಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ. ಐ.ಎಸ್.ಐ.ಎಸ್ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹ್ದಿ ಬಂಧನವನ್ನು ವಿರೋಧಿಸಿ ಉಗ್ರರು ಬೆಂಗಳೂರಿನಲ್ಲೂ ದಾಳಿ ನಡೆಸುವ ಯೋಜನೆ ರೂಪಿಸುತ್ತಿದೆ. ಬೆಂಗಳೂರಿನಲ್ಲಿ ದಾಳಿ ನಡೆಸುವ ಮೂಲಕ ಮೆಹ್ದಿಯ ಬಿಡುಗಡೆಗಾಗಿ ಬೇಡಿಕೆಯೊಡ್ಡುವ ಸಾಧ್ಯತೆ ಇದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಎಚ್ಚರಿಕೆ ಬಂದಿರುವ ಟ್ವಿಟರ್ ಖಾನೆಯನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ನಗರದಲ್ಲಿ ಅಗತ್ಯ ಭದ್ರತೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಟ್ವೀಟರ್ ಉಗ್ರ ಮೆಹ್ದಿ ಬಂಧನಕ್ಕೆ ವಿರುದ್ಧವಾಗಿ ಸೇಡು ತೀರಿಸಿಕೊಳ್ಳುವುದಾಗಿ ಐಸಿಸ್, ಅಪರಾಧ ವಿಭಾಗದ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಎಚ್ಚರಿಕೆ ನೀಡಿತ್ತು.