ನವದೆಹಲಿ : 'ಕಾಂಗ್ರೆಸ್' ಪಕ್ಷ ಮಹಾತ್ಮಾ ಗಾಂಧಿಯ ತತ್ವಗಳನ್ನು ಹತ್ಯೆ ಮಾಡಿದೆ ಎಂಬ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ನೀಡಿರುವ ವಿವಾದಾತ್ಮಕ ಹೇಳಿಕೆ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು ಸಾಕ್ಷಿ ಮಹಾರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಡಿ.12ರ ಸಂಸತ್ ಕಲಾಪ ಆರಂಭವಾದ ನಂತರ ಲೋಕಸಭೆ, ರಾಜ್ಯ ಸಭೆಯಲ್ಲಿ ತೀವ್ರ ಗದ್ದಲವೆಬ್ಬಿಸಿದ ಕಾಂಗ್ರೆಸ್ ಸದಸ್ಯರು ಸಾಕ್ಷಿ ಮಹಾರಾಜ್ ನೀಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ. ಸಾಕ್ಷಿ ಮಹಾರಾಜ್ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿರುವುದನ್ನು ಒಪ್ಪಲು ತಯಾರಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ. ಕೆಲವು ಕಾಂಗ್ರೆಸ್ ಸಂಸದರು ಸಂಸತ್ ಭವನದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಸುಗಮ ಸಂಸತ್ ಕಲಾಪಕ್ಕೆ ಅಡ್ದಿ ಉಂಟುಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಕಾಂಗ್ರೆಸ್ ಗಾಂಧೀಜಿ ಅವರ ತತ್ವಗಳನ್ನು ಪಾಲಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸಾಕ್ಷಿ ಮಹಾರಾಜ್ ಅವರ ಹೇಳಿಕೆಗೆ ವೆಂಕಯ್ಯ ನಾಯ್ಡು ಬೆಂಬಲ ನೀಡಿದ್ದಾರೆ.