ಬೆಳಗಾವಿ : ಡಿ.10ರ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುವುದಕ್ಕೂ ಮುನ್ನ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಸಚಿವರು-ಶಾಸಕರ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ಶಾಸಕರು ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. ಸಚಿವರು ಅಭಿವೃದ್ಧಿ ಬಗ್ಗೆ ಗಮನ ಹರಿಸದೇ ಕಮಿಷನ್ ಏಜೆಂಟ್ ಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಸಚಿವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬೆಂಗಳೂರು ಯಶವಂತಪುರದ ಶಾಸಕ, ಸೋಮಶೇಖರ್, ಪಕ್ಷದ ಸಚಿವರು ಕಮಿಷನ್ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಅವರಿಗೆ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್, ಎಸ್.ಆರ್ ಪಾಟೀಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಸಚಿವರು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪವನ್ನು ತಳ್ಳಿಹಾಕಿರುವ ಎಸ್.ಆರ್ ಪಾಟೀಲ್, ವಿಜಯಾನಂದ ಕಾಶಪ್ಪನವರ್ ತಮ್ಮ ವಿರುದ್ಧ ಆರೋಪ ಮಾಡುವುದರ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಇಂತಹ ಬೆದರಿಕೆಗಳಿಗೆ ತಾವು ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಅರಣ್ಯ ಸಚಿವ ರಮಾನಾಥ್ ರೈ ವಿರುದ್ಧವೂ ಆರೋಪ ಕೇಳಿಬಂದಿದ್ದು ಕಾಂಗ್ರೆಸ್ ಶಾಸಕಿ ಶಕುಂತಲಾ ಶೆಟ್ಟಿ, ತಮ್ಮ ಕ್ಷೇತ್ರದ ವಿಷಯಗಳಲ್ಲಿ ರಮಾನಾಥ್ ರೈ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ಶಾಸಕರೇ ಸಚಿವರ ವಿರುದ್ಧ ಆರೋಪ ಮಾಡಿರುವುದು ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸೂಚಿಸುವಂತಿದೆ.