BW News Bureau : ನಗರದಲ್ಲಿ ಹೆಚ್ಚುತ್ತಿರುವ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಪ್ಪಿಸಲು ಪೊಲೀಸರು ವಿನೂತನ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ. ಇನ್ನು ಮುಂದೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ದಿನದ 24ಗಂಟೆಯೂ ಕಾರ್ಯನಿರ್ವಹಿಸುವ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲು ಇಲಾಖೆ ಮುಂದಾಗಿದೆ.
ಸದ್ಯಕ್ಕೆ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮರಾಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವು ಕ್ಯಾಮೆರಾಗಳು ಕೆಟ್ಟು ಹೋಗಿ ತಿಂಗಳು ಕಳೆದರೂ ರಿಪೇರಿ ಮಾಡಿಸುವ ಗೋಜಿಗೆ ಪೊಲೀಸರು ಕೂಡ ಹೋಗಿಲ್ಲ. ಇದರಿಂದಾಗಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅಪಘಾತಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ.
ಸಿಗ್ನಲ್ ಜಂಪ್ ನಿಂದಾಗಿ ಸಂಭವಿಸುವ ಅಪಘಾತ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಾರಂಭಿಸುತ್ತಿರುವ ಯೋಜನೆಗಾಗಿ ಸಂಚಾರಿ ನಿರ್ವಹಣಾ ಕೇಂದ್ರ(ಟಿ.ಎಂ.ಸಿ) ಪ್ರಾರಂಭವಾಗಲಿದ್ದು ಇದರ ನಿರ್ವಹಣೆಗಾಗಿ ಪೊಲೀಸರು ನಿಯೋಜಿತರಾಗಲಿದ್ದಾರೆ.
ಪ್ರತಿಷ್ಠಿತ ಭಾರತ್ ಎಲೆಕ್ಟ್ರಾನಿಕ್ಸ್ ಕಂಪನಿಗೆ ಸಿಸಿ ಟಿವಿ ಕ್ಯಾಮೆರಾಗಳನ್ನು ತಯಾರಿಸುವ ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು ಜ.1ರಿಂದಲೇ ಅಳವಡಿಕೆಯಾಗಲಿದೆ.