ನವದೆಹಲಿ : 'ಚುನಾವಣಾ ಪ್ರಚಾರ'ದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿದ್ದಾರೆ.
ಸಾಧ್ವಿ ನಿರಂಜನ ಜ್ಯೋತಿ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಕೋಲಾಹಲ ಉಂಟುಮಾಡಿದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ವೆಂಕಯ್ಯ ನಾಯ್ಡು, ಯಾವುದೇ ಕಾರಣಕ್ಕೂ ಸರ್ಕಾರ ಸಾಧ್ವಿ ನಿರಂಜನ ಜ್ಯೋತಿ ಅವರಿಂದ ರಾಜೀನಾಮೆ ಪಡೆಯುವುದಿಲ್ಲ ಎಂದು ಸಂಸತ್ ಗೆ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಸಾಧ್ವಿ ನಿರಂಜನ ಜ್ಯೋತಿ ಅವರು ಕ್ಷಮೆ ಕೇಳಿದರೆ ಸಾಲದು ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಈ ಬಗ್ಗೆ ಪ್ರಧಾನಿ ಮೋದಿ ಅವರೂ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದರು.
ಆದರೆ ಪ್ರತಿಪಕ್ಷಗಳ ಬೇಡಿಕೆಗೆ ಮಣಿಯದ ಸರ್ಕಾರ ಸಾಧ್ವಿ ನಿರಂಜನ ಜ್ಯೋತಿ ಅವರ ರಾಜೀನಾಮೆ ಪಡೆಯಲು ನಿರಾಕರಿಸಿದೆ.