ಹೈದ್ರಾಬಾದ್ : ಹೈದ್ರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದ ಆರೋಪಿ ಓಬಳೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ನ.20ರಂದು ಕರ್ನೂಲು-ಅನಂತಪುರ ಗಡಿಯಲ್ಲಿ ಬಸ್ ತಡೆದು ಆರೋಪಿಯನ್ನು ವಿಶೇಷ ತನಿಖಾ ತಂಡ ಬಂಧಿಸಿದೆ. ಬಂಧಿತ ಆರೋಪಿ ಓಬಳೇಶ್, ನಾಂಪಲ್ಲಿಯಲ್ಲಿ ಅಬಕಾರಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ಹಣದ ಆಸೆಯಿಂದ ಉದ್ಯಮಿ ನಿತ್ಯಾನಂದ ರೆಡ್ಡಿ ಅವರನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿ ವಿಫಲನಾಗಿದ್ದ. ಆತ ಕಳೆದ 15 ದಿನಗಳಿಂದ ರಜೆಯಲ್ಲಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಂತರ ತಲೆಮರೆಸಿಕೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅರಬಿಂದ ಫಾರ್ಮ್ ಕಂಪನಿ ಉಪಾಧ್ಯಕ್ಷ ನಿತ್ಯಾನಂದರೆಡ್ಡಿ, ನ.19ರಂದು ಬೆಳಿಗ್ಗೆ ಹೈದ್ರಾಬಾದ್ ನ ಬಂಜಾರ ಹಿಲ್ಸ್ ನಲ್ಲಿರುವ ಕೆ.ಬಿ.ಪಾರ್ಕ್ನಲ್ಲಿ ವಾಯುವಿಹಾರಕ್ಕಾಗಿ ತೆರಳಿದ್ದ ಸಂದರ್ಭದಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಎಕೆ-47ನಿಂದ ಏಕಾ ಏಕಿ ಶೂಟೌಟ್ ನಡೆಸಿದ್ದ ಓಬಳೇಶ್, ನಿತ್ಯಾನಂದ ರೆಡ್ಡಿ ಅವರನ್ನು ಕಿಡ್ನ್ಯಾಪ್ ಮಾಡಿ ಹಣಕ್ಕಾಗಿ ಬೇಡಿಕೆ ಇಡುವ ಯೋಜನೆ ರೂಪಿಸಿದ್ದ. ಆದರೆ ತಮ್ಮ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ನಿತ್ಯಾನಂದರೆಡ್ಡಿ ತಮ್ಮ ಬಳಿಯಿರುವ ಗನ್ ನಿಂದ ಪ್ರತಿ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಆರೋಪಿ ಪರಾರಿಯಾಗಿದ್ದ. ಆರೋಪಿಯನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿತ್ತು.