ನವದೆಹಲಿ : 'ನವದೆಹಲಿ'ಯಲ್ಲಿ ನಾಳೆಯಿಂದ ಪ್ರಾರಂಭವಾಗಲಿರುವ ಸೈಬರ್ ಭದ್ರತಾ ಸಮಾವೇಶದಲ್ಲಿ 8 ವರ್ಷದ ಬಾಲಕ ಸೈಬರ್ ತಜ್ಞರೊಂದಿಗೆ ಭಾಗವಹಿಸಲಿದ್ದು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾನೆ.
ಸೈಬರ್ ಭದ್ರತೆ ಕುರಿತು ಮಾತನಾಡಲಿರುವ ಬಾಲಕ ರುಬೇನ್ ಪೌಲ್, ಭಾರತೀಯ ಮೂಲದವನು ಎಂಬುದು ವಿಶೇಷ. ಈತ ಭಾರತೀಯ ಮೂಲದವನಾದರೂ ಸದ್ಯಕ್ಕೆ ಅಮೇರಿಕಾ ನಿವಾಸಿ. ಕಳೆದ ಒಂದೂ ವರೆವರ್ಷದ ಹಿಂದೆ ಕಂಪ್ಯೂಟರ್ ಬಗ್ಗೆ ತಿಳಿದುಕೊಳ್ಳಲು ಪ್ರಾರಂಭಿಸಿದ ರುಬೇನ್ ಪೌಲ್, ಇದೀಗ ತನ್ನದೇ ಆದ ಕಂಪ್ಯೂಟರ್ ಯೋಜನೆಗಳನ್ನು ವಿನ್ಯಾಸ ಮಾಡುವ ಮಟ್ಟಿಗೆ ಕಂಪ್ಯೂಟರ್ ಜಗತ್ತನ್ನು ಕರತಲಾಮಲಕ ಮಾಡಿಕೊಂಡಿದ್ದಾನೆ.
ತನ್ನ ತಂದೆ ಮನೋ ಪೌಲ್ ಅವರಿಂದ ಆಬ್ಜೆಕ್ಟ್ ಸಿ ಪ್ರೋಗ್ರಾಮಿಂಗ್ ಮತ್ತು ಐ.ಒ.ಎಸ್ ನಲ್ಲಿ ಸ್ವಿಫ್ಟ್ ಪ್ರೊಗ್ರಾಮಿಂಗ್ ಕಲಿತಿದ್ದಾರೆ. ಒರಿಸ್ಸಾರಲ್ಲಿ ಹುಟ್ಟಿ ಬೆಳೆದಿದ್ದ ಮನೋ ಪೌಲ್ 2000 ರಲ್ಲಿ ಅಮೆರಿಕಾಕ್ಕೆ ತೆರಳಿದ್ದರು.
ಆಗಸ್ಟ್ ನಲ್ಲಿ 'ಪ್ರೂಡೆಂಟ್ ಗೇಮ್ಸ್" ಹೆಸರಿನ ಗೇಮಿಂಗ್ ಸಂಸ್ಥೆಯನ್ನು ಪ್ರಾರಂಭಿಸಿದ ರೂಬೆನ್ ಈಗ ಆ ಕಂಪನಿಯ ಸಿಇಒ. ಮನೋ ಪೌಲ್ ಸಂಸ್ಥೆಯಲ್ಲಿ ಪಾಲುದಾನೂ ಹೌದು.
"ಇದು ರುಬೇನ್ ಸೈಬರ್ ಭದ್ರತೆಯ ಮೇಲೆ ಭಾಷಣ ನೀಡುತ್ತಿರುವ ನಾಲ್ಕನೇ ಸಮಾವೇಶ. ಮಕ್ಕಳಿಗೆ ಸೈಬರ್ ಭದ್ರತೆಯ ತಿಳುವಳಿಕೆಯ ಬಗ್ಗೆ ಅವನು ಮಾತನಾಡುತ್ತಾನೆ" ಎಂದು ಮನೋ ಪೌಲ್ ತಿಳಿಸಿದ್ದಾರೆ. ವಿದೇಶಾಂಗ ರಾಜ್ಯ ಸಚಿವ ವಿ ಕೆ ಸಿಂಗ್ ಕೂಡ ಈ ಸಮಾರಂಭದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ.