BW News Bureau : ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಿರುವುದನ್ನು ಖಂಡಿಸಿ ನಗರ ಬಿಜೆಪಿ ಘಟಕದ ಸದಸ್ಯರು ನ.10ರಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಮಹಾನಗರ ಪಾಲಿಕೆ(ಬಿಬಿಎಂಪಿ) ಕಾರ್ಪೊರೇಟರ್ ಗಳು, ಶಾಸಕರಾದ ಅಶ್ವತ್ಥ್ ನಾರಾಯಣ ಸೇರಿದಂತೆ ಹಲವು ಬಿಜೆಪಿ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರ ನೀರಿನ ದರವನ್ನು ಇಳಿಕೆ ಮಾಡಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿದ್ದಾರೆ.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಕಾರ್ಪೊರೇಷನ್, ಮೆಜಸ್ಟಿಕ್ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಯಿತು.
ಜಲಮಂಡಳಿ ವಿದ್ಯುತ್ ದರ ಏರಿಕೆಯ ನಷ್ಟವನ್ನು ತುಂಬಿಸಿಕೊಳ್ಳಲು ನ.2ರಂದು ನೀರಿನ ಬೆಲೆ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಆದೇಶಿಸಿತ್ತು. ಸರ್ಕಾರದ ಆದೇಶದಿಂದ ಗೃಹಪಯೋಗಿ ನೀರಿನ ದರ ಪ್ರತಿ 1 ಸಾವಿರ ಲೀ.ಗೆ 1 ರೂಪಾಯಿ ಹೆಚ್ಚಾಗಿದೆ. ಈ ಹಿಂದೆ ಪ್ರತಿ 1 ಸಾವಿರ ನೀರಿಗೆ ರೂ.6 ಇತ್ತು. ಹೊಸ ದರ ಪ್ರತಿ 1 ಸಾವಿರ ಲೀಟರ್ ನೀರಿಗೆ. 7 ರೂ ದರ ಏರಿಕೆಯಾಗಿದೆ.