ಚೆನ್ನೈ : ದೇಶಾದ್ಯಂತ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಗೆ ಭಿನ್ನಮತದ ಬಿಸಿ ತಟ್ಟಿದೆ. ತಮಿಳುನಾಡು ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಮಾಜಿ ಕೇಂದ್ರ ಸಚಿವ ಜಿ.ಕೆ.ವಾಸನ್ ಅವರು ಪಕ್ಷ ತೊರೆದು, ನೂತನ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ನ.3ರಂದು ಅಧಿಕೃತವಾಗಿ ನಿರ್ಧಾರ ಪ್ರಕಟಿಸಿರುವ ವಾಸನ್, ಪ್ರಮುಖ ವಿಷಯಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಪಕ್ಷ ತೊರೆದಿದ್ದಾರೆ. ಇದಕ್ಕೂ ಮುನ್ನ ಬಿ.ಎಸ್. ಘ್ನಾನದೇಶಿಕನ್ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ರಾಜಿನಾಮೆ ನೀಡಿದ್ದರು.
ಈ ಮಧ್ಯೆ, ವಾಸನ್ ಅವರ ರಾಜಕೀಯ ವಿರೋಧಿ ಇವಿಕೆಎಸ್ ಇಳಂಗೋವನ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನೇಮಕ ಮಾಡಿತ್ತು.
14 ವರ್ಷಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವ ವಾಸನ್, ತಾವು ಪ್ರಾದೇಶಿಕ ಪಕ್ಷ ರಚಿಸುವುದಾಗಿ ತಿಳಿಸಿದ್ದಾರೆ.