ನವದೆಹಲಿ : ವಾಹನ ಸವಾರರಿಗೆ ಮತ್ತೊಮ್ಮೆ ಸಂತಸದ ಸುದ್ದಿ! ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಭಾರೀ ಇಳಿಕೆಯಾಗಿದೆ.
ಇಳಿಕೆಯಾಗಿರುವ ದರ ನಿರೀಕ್ಷೆಗೂ ಮೀರಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 2.41 ರೂ ಇಳಿಕೆಯಾಗಿದ್ದರೆ, ಡೀಸೆಲ್ ದರ 2.25 ರೂಪಾಯಿ ಇಳಿಕೆಯಾಗಿದೆ. ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ದರಗಳು ತೆರಿಗೆ ರಹಿತವಾಗಿದ್ದು, ತೆರಿಗೆಯೂ ಸೇರಿದರೆ ದರದ ಇಳಿಕೆ ಇನ್ನಷ್ಟು ಹೆಚ್ಚಲಿದೆ.
ಕಳೆದ 2 ದಿನಗಳ ಹಿಂದೆಯೇ ಪೆಟ್ರೋಲ್, ಡಿಸೇಲ್ ದರ ಇಳಿಕೆಯಾಗಲಿದೆ ಎಂದು ಹೇಳಲಾಗಿತ್ತು. ಪ್ರತೀ ಲೀಟರ್ ಪೆಟ್ರೋಲ್ ದರ 1.5೦-2ರೂಪಾಯಿ ಡಿಸೇಲ್ ದರ 1.25-1.50 ರೂಪಾಯಿ ಕಡಿಮೆಯಾಗುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಗಿಂತಲೂ ತುಸು ಹೆಚ್ಚಾಗಿಯೇ ದರ ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿದಿರುವುದರಿಂದ ಭಾರತದಲ್ಲಿ ದರ ಇಳಿಕೆಯಾಗಿದೆ. ಒಂದೇ ತಿಂಗಳಿನಲ್ಲಿ ಪೆಟ್ರೋಲ್ ದರ ಕಡಿಮೆಯಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ವಾರವಷ್ಟೇ ಕೇಂದ್ರ ಸರ್ಕಾರ ತೈಲ ಬೆಲೆಯನ್ನು 3.37 ರೂಪಾಯಿಯಷ್ಟು ಇಳಿಕೆ ಮಾಡಿತ್ತು.
ಬೆಲೆ ಇಳಿಕೆ ಜಾರ್ಖಂಡ್, ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.