ನವದೆಹಲಿ : ವಿದೇಶದಲ್ಲಿ ಕಪ್ಪುಹಣ ಹೊಂದಿರುವ 627 ಖಾತೆದಾರರ ವಿವರ ಹಾಗೂ ಖಾತೆ ಸಂಖ್ಯೆ, ಹಣದ ಮೊತ್ತದ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ತಿಳಿಸಿದ್ದಾರೆ.
ಕಪ್ಪುಹಣದ ಖಾತೆದಾರ ಹೆಸರು ಹಾಗೂ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ನ್ಯಾಯಾಲಯ ಈ ಲಕೋಟೆ ತೆರೆಯುವುದಿಲ್ಲ, ಎಸ್.ಐ.ಟಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾತ್ರ ಲಕೋಟೆ ತೆರೆಯುವ ಅಧಿಕಾರವಿದೆ. ಈ ನಿಟ್ಟಿನಲ್ಲಿ ಇಂದೇ ಲಕೋಟೆಯನ್ನು ಎಸ್.ಐ.ಟಿಗೆ ನೀಡಲಿದೆ ಎಂದು ತಿಳಿಸಿದರು.
2015ರ ಮಾರ್ಚ್ 31ರೊಳಗೆ ಕಪ್ಪುಹಣದ ತನಿಖೆ ಮುಕ್ತಾಯಗೊಳಿಸುವಂತೆ ಸುಪ್ರೀಂ ಕೋರ್ಟ್ ನ್ಯಿವೃತ್ತ ನ್ಯಾ.ಎಂ.ಬಿ.ಷಾ ನೇತೃತ್ವದ ಎಸ್.ಐ.ಟಿ(ವಿಶೇಷ ತನಿಖಾ ತಂಡ)ಗೆ ಸೂಚನೆ ನೀಡಿದೆ. ನವೆಂಬರ್ ನಲ್ಲಿ ತನಿಖಾ ಪ್ರಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ತಿಳಿಸಲಾಗಿದ್ದು, ಡಿಸೆಂಬರ್ ಮೂರಕ್ಕೆ ವಿಚರಾಣೆ ಮುಂದೂಡಲಾಗಿದೆ ಎಂದು ತಿಳಿಸಿದರು.
ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಜತೆ ಪರಸ್ಪರ ಮಾಹಿತಿ ಹಂಚಿಕೊಂಡು ಎಸ್.ಐ.ಟಿ ತನಿಖೆ ನಡೆಸಲಿದೆ. ಮೊದಲ ಹಂತದಲ್ಲಿ 220 ಖಾತೆದಾರ ವಿರುದ್ಧ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ.