ನವದೆಹಲಿ : ಸ್ವಿಜರ್ಲೆಂಡ್ ನಿಂದ ಭಾರತಕ್ಕೆ ದಾಖಲೆ ಪ್ರಮಾಣದಲ್ಲಿ ಚಿನ್ನ ರಫ್ತಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಭಾರತಕ್ಕೆ ಸುಮಾರು 70,000 ಕೋಟಿ ರೂ(1100 ಕೋಟಿ ಸ್ವಿಸ್ ಫ್ರಾನ್ಸ್) ಮೌಲ್ಯದ ಚಿನ್ನ ರಫ್ತು ಮಾಡಲಾಗಿದೆ ಎಂದು ಸ್ವಿಸ್ ಕಸ್ಟಮ್ಸ್ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.
ಸ್ವಿಸ್ ಬ್ಯಾಂಕ್ ಗಳಲ್ಲಿರುವ ಕಪ್ಪುಹಣ ವಾಪಸ್ ತರಲು ಭಾರತ ಸರ್ಕಾರ ಕಠಿಣ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ವರ್ಷವೊಂದರಲ್ಲಿ ಇಷ್ಟೊಂದು ಪ್ರಮಾಣದ ಬಂಗಾರ ಭಾರತಕ್ಕೆ ರಫ್ತಾಗಿರುವುದು ಇದೇ ಮೊದಲಾಗಿದೆ.
ಕಪ್ಪುಹಣ ವಾಪಸ್ ತರುವ ಬಗ್ಗೆ ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲೇ ಚಿನ್ನ ಆಮದು ಹೆಚ್ಚಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಒಟ್ಟಾರೆ ಈ ವರ್ಷ ಸೆಪ್ಟೆಂಬರ್ ನಲ್ಲಿ ಸ್ವಿಜರ್ಲೆಂಡ್ ನಿಂದ 347ಟನ್ ಚಿನ್ನ ರಫ್ತು ಮಾಡಲಾಗಿರುವುದು ಗಮನಾರ್ಹ ಅಂಶ.
ಕಪ್ಪುಹಣ ತನಿಖೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಇಂದು ಅಫಿಡವಿಟ್ ಸಲ್ಲಿಸಲಿದ್ದು ಇದರಲ್ಲಿ ಮೂವರ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.