ನವದೆಹಲಿ : ಮಹಾರಾಷ್ಟ್ರ, ಹರ್ಯಾಣದ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದೊರೆತ ಬೆನ್ನಲ್ಲೇ ದೆಹಲಿ ಚುನಾವಣೆ ಎದುರಿಸಿ ಗೆಲುವು ಸಾಧಿಸುವಂತೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಸವಾಲು ಹಾಕಿದ್ದಾರೆ.
ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಬಿಜೆಪಿಗೆ ದೆಹಲಿ ಚುನಾವಣೆ ಎದುರಿಸುವ ಧೈರ್ಯ ಇದೆಯೇ ಎಂದು ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಅಲ್ಲದೇ ಬಿಜೆಪಿಗೆ ಧೈರ್ಯವಿದ್ದರೆ ದೆಹಲಿ ಚುನಾವಣೆಯನ್ನು ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.
ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಆಪ್ ನ ಮತ್ತೋರ್ವ ಮುಖಂಡ ಯೋಗೇಂದ್ರ ಯಾದವ್ ಸಹ ಬಿಜೆಪಿಗೆ ಧೈರ್ಯವಿದ್ದರೆ ದೆಹಲಿ ಚುನಾವಣೆಯನ್ನು ಎದುರಿಸಲಿ ಎಂದು ಸವಾಲು ಹಾಕಿದ್ದರು.
ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿ ಈ ಹಿಂದೆ ಯತ್ನಿಸಿತ್ತಾದರೂ ಅಧಿಕೃತ ನಿರ್ಧಾರ ಪ್ರಕಟಿಸಿರಲಿಲ್ಲ.