ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಸಚಿವಾಲಯದ ವಿತ್ತ ಕಾರ್ಯದರ್ಶಿ ಅರವಿಂದ್ ಮಾಯಾರಾಮ್ ಅವರನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಿದೆ. ಅವರ ಸ್ಥಾನಕ್ಕೆ ರಾಜಸ್ತಾನ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಜೀವ್ ಮೆಹ್ ರಿಷಿ ಅವರನ್ನು ನಿಯೋಜಿಸಲಾಗಿದೆ.
ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಅರವಿಂದ್ ಮಾಯಾರಾಮ್ ಅವರನ್ನು ಪ್ರವಾಸೋದ್ಯಮ ಇಲಾಖೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕಳೆದ ಜೂನ್ ತಿಂಗಳಲ್ಲಿ ಸರ್ಕಾರ ತೆರಿಗೆ ಇಲಾಖೆ ಕಾರ್ಯದರ್ಶಿ ರಾಜೀವ್ ಟಾಕ್ರೂ ಅವರನ್ನು ಇಲಾಖೆಯಿಂದ ವರ್ಗಾವಣೆ ಮಾಡಲಾಗಿತ್ತು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಸ್ಥಿತ್ವದಲ್ಲಿದ್ದ ಸಂದರ್ಭದಲ್ಲಿ ಟಾಕ್ರೂ ಮತ್ತು ಮಾಯಾರಾಮ್ ಅವರನ್ನು ತೆರಿಗೆ ಇಲಾಖೆ ಆರ್ಥಿಕ ವ್ಯವಹಾರಗಳ ಸಚಿವಾಲಯಕ್ಕೆ ನೇಮಕ ಮಾಡಲಾಗಿತ್ತು.
ಆರ್ಥಿಕ ವ್ಯವಹಾರಗಳ ಸಚಿವಾಲಯದ ನೂತನ ಹಣಕಾಸು ಕಾರ್ಯದರ್ಶಿ, ಮೆಹ್ ರಿಷಿ 1978ರ ಬ್ಯಾಚ್ ನ ಐ.ಎ.ಎಸ್ ಅಧಿಕಾರಿಯಾಗಿದ್ದಾರೆ. ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅಲೋಕ್ ರಾವತ್ ಅವರನ್ನೂ ವರ್ಗಾವಣೆ ಮಾಡಲಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ವಿವಿಧ ಇಲಾಖೆಗಳ 20ಕಾರ್ಯದರ್ಶಿಗಳನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.