ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ವ್ಯಾಪಾರೀಕರಣ ಮಾಡುತ್ತಿದ್ದಾರೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ, ಸಂಸದ ಮಲ್ಲಿಕಾರ್ಜಿನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಮೈಯಲ್ಲಿ ಹರಿಯುತ್ತಿರುವುದು ವ್ಯಾಪಾರಿ ರಕ್ತ. ಅವರು ಸತ್ಯಕ್ಕಿಂತ ಹೆಚ್ಚು ಅಸತ್ಯಕ್ಕೆ ಒಲವು ತೋರುತ್ತಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನ ಯೋಜನೆಗಳಿಗೆ ಹೊಸ ರೂಪ ನೀಡಿ ಜಾರಿಗೆ ತರುತ್ತಿರುವ ಮೋದಿ, ಯಾವುದೇ ಯೋಜನೆಗಳನ್ನು ಹೊಸದಾಗಿ ಜಾರಿಗೆ ತಂದಿಲ್ಲ. ಅಲ್ಲದೇ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಲು ಹಣವೆಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿಯವರು ಬಂಡವಾಳಶಾಹಿ ಉದ್ಯಮಿಗಳು, ಶ್ರೀಮಂತರ ಪರವಾಗಿದ್ದಾರೆ ಬಡವರ ಪರ ಯೋಜನೆಗಳಿಗೆ ಕತ್ತರಿ ಹಾಕುತ್ತಿದ್ದಾರೆ. ಈ ಮೂಲಕ ಭಾರತವನ್ನು ವ್ಯಾಪಾರೀಕರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಖರ್ಗೆ, ಮಹಾರಾಷ್ಟ್ರದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಅಲೆಯಿಲ್ಲ, ಮಹಾರಾಷ್ಟ್ರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಡೆದು ದಿಕ್ಕಾಪಾಲಾಗಿವೆ. ಹೀಗಾಗಿ ಅಲ್ಲಿನ ಮತದಾರರು ಗೊಂದಲದಲ್ಲಿದ್ದಾರೆ, ಆದಾಗ್ಯೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಹುಮತ ಸಿಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.