ಇಂಚೆನ್ : ಏಷ್ಯನ್ ಗೇಮ್ಸ್ ಮಹಿಳಾ ಬಾಕ್ಸಿಂಗ್ ನಲ್ಲಿ ಭಾರತದ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಚಿನ್ನದ ಬೇಟೆ ಮುಂದುವರೆದಿದೆ.
ಅ.1ರಂದು ನಡೆದ ಫೈನಲ್ ಪಂದ್ಯದಲ್ಲಿ 51ಕೆ.ಜಿ ಮಹಿಳಾ ಬಾಕ್ಸಿಂಗ್ ವಿಭಾಗದಲ್ಲಿ ಖಜಕಿಸ್ತಾನದ ಶೆಖರ್ ಬೆಕೋವಾ ಅವರನ್ನು ಮೇರಿ ಕೋಮ್ ಪರಾಭವಗೊಳಿಸಿದ್ದಾರೆ.
ನಾಲ್ಕು ಸುತ್ತಿನ ಈ ಹೋರಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಮೇರಿ ಕೋಮ್ ಚಿನ್ನದ ಪದಕಕ್ಕೆ ಭಾಜನರಾಗುವ ಮೂಲಕ ಭಾರತ ಇನ್ನೊಂದು ಚಿನ್ನದ ಪದಕ ಮುಡಿಗೇರಿಸಿಕೊಂಡಂತಾಗಿದೆ. ಇಲ್ಲಿಯವರೆಗೆ 6 ಬಾರಿ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸಿ 5 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್, ಒಲಂಪಿಕ್ಸ್ ನಲ್ಲಿ ಪದಕ ಗೆದ್ದ ಏಕೈಕ ಮಹಿಳಾ ಬಾಕ್ಸರ್ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಮಧ್ಯೆ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಅನ್ಯಾಯವಾಗಿದ್ದು, 60ಕೆ.ಜಿ ಮಹಿಳಾ ವಿಭಾಗದ ಲೈಟ್ ವೇಟ್ ಬಾಕ್ಸಿಂಗ್ ನಲ್ಲಿ ಗೊಂದಲದ ಫಲಿತಾಂಶದಿಂದ ಎಲ್.ಸರಿತಾ ದೇವಿ ತೃತೀಯ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಇದರಿಂದ ಬೇಸರ ವ್ಯಕ್ತಪಡಿಸಿರುವ ಸರಿತಾ ದೇವಿ ಕಂಚಿನ ಪದಕ ತಿರಸ್ಕರಿಸಲು ನಿರ್ಧರಿಸಿದ್ದಾರೆ.
ಸೆ.30ರಂದು ನಡೆದ ಪಂದ್ಯದಲ್ಲಿ ವಿವಾದಾತ್ಮಕ ಫಲಿತಾಂಶದಿಂದಾಗಿ ಸರಿತಾ ದಕ್ಷಿಣ ಕೊರಿಯಾದ ಜೀನಾ ಪಾರ್ಕ್ ಎದುರು ಸೋಲನುಭವಿಸಬೇಕಾಯಿತು. ಸರಿತಾ ಕೊನೆಯ ಪಂದ್ಯದಲ್ಲಿ ಪ್ರಬಲ ಪಂಚ್ ನೀಡಿ ಪಾಯಿಂಟ್ ಗಳಿಸಿದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೇ ತೀರ್ಪುಗಾರರು ಸ್ಥಳೀಯ ಆಟಗಾರ್ತಿ ಕೈ ಎತ್ತಿ ಹಿಡಿದು ವಿಜಯಿ ಎಂದು ಘೋಷಿಸಿದ್ದರು.
ತೀರ್ಪುಗಾರರ ತಪ್ಪು ನಿರ್ಧಾರ ಗೊಂದಲಕ್ಕೆ ಕಾರಣವಾಗಿದ್ದರಿಂದ ಪಂದ್ಯದ ಬಳಿಕ ಭಾರತ ತಪ್ಪು ನಿರ್ಧಾರ ಪ್ರತಿಭಟಿಸಿ ರೆಫರಿಗೆ ಮನವಿ ಸಲ್ಲಿಸಿತಾದರೂ ಭಾರತದ ಮನವಿ ತಿರಸ್ಕರಿಸಲಾಯಿತು. ಇದರಿಂದ ಬೇಸರಗೊಂಡಿರುವ ಸರಿತಾ ತಮಗೆ ಲಭ್ಯವಾದ ಕಂಚಿನ ಪದಕವನ್ನು ತಿರಸ್ಕರಿಸಿದ್ದಾರೆ.