ನವದೆಹಲಿ : ವಾಹನ ಸವಾರರಿಗೊಂದು ಸಿಹಿ ಸುದ್ದಿ, ಪೆಟ್ರೋಲ್ ಹಾಗೂ ಡಿಸೇಲ್ ದರ ಮತ್ತೆ ಇಳಿಕೆಯಾಗಲಿದೆ. ಈ ಮೂಲಕ ಕೇಂದ್ರ ಸರ್ಕಾರ ಜನರಿಗೆ ದೀಪಾವಳಿ ಉಡುಗೊರೆ ನೀಡಿದೆ.
ಪೆಟ್ರೋಲ್ ಬೆಲೆ 1 ರೂ.ಯಿಂದ 1.75 ರೂ.ವರೆಗೆ ಇಳಿಕೆಯಾಗುವ ನಿರೀಕ್ಷೆಯಿದ್ದು, ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವ ಸಾಧ್ಯತೆಯಿದೆ.
ಡೀಸೆಲ್ ದರ ಕೂಡ ಇಳಿಕೆಯಾಗಲಿದ್ದು, ಲೀಟರ್ ಗೆ 1 ರೂ. ನಷ್ಟು ಇಳಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿರುವ ಹಿನ್ನಲೆಯಲ್ಲಿ ದೇಶದಲ್ಲಿ ತೈಲ ಬೆಲೆಯಲ್ಲಿಯೂ ಇಳಿಕೆ ಮಾಡಲಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಂದ ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರ 75.13 ರೂ ಇದ್ದು, 1.75 ರೂ ಇಳಿಕೆಯಾದರೆ 73.38 ರೂ.ಗೆ ಸಿಗಲಿದೆ.