ನವದೆಹಲಿ : 'ಆಮ್ ಆದ್ಮಿ ಪಕ್ಷ'ದ ನಾಯಕ ಅರವಿಂದ್ ಕೇಜ್ರಿವಾಲ್ ದೆಹಲಿ ರಾಜ್ಯಪಾಲರ ಮೇಲೆ ಆರೋಪ ಮಾಡಿದ್ದಾರೆ.
ಪ್ರವಾಹ ಪರಿಸ್ಥಿತಿಯಲ್ಲಿರುವ ಜಮ್ಮು-ಕಾಶ್ಮೀರಕ್ಕೆ ಸಹಾಯ ಧನ ಕಳಿಸದಂತೆ ತಮ್ಮ ಪಕ್ಷ ಶಾಸಕರನ್ನು ದೆಹಲಿ ರಾಜ್ಯಪಾಲ ನಜೀಬ್ ಜಂಗ್ ತಡೆಯುತ್ತಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಪ್ರತಿಯೊಬ್ಬ ಶಾಸಕರ ಪರಿಹಾರ ನಿಧಿಯಿಂದ 20 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿ ಅದನ್ನು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪರಿಹಾರ ನಿಧಿಗೆ ವರ್ಗಾವಣೆ ಮಾಡಬೇಕೆಂದು 27 ಆಮ್ ಆದ್ಮಿ ಪಕ್ಷದ ಶಾಸಕರು ದೆಹಲಿ ರಾಜ್ಯಪಾಲ ನಜೀಬ್ ಜಂಗ್ ಅವರಿಗೆ ಪತ್ರ ಬರೆದಿದ್ದರು. ಆದರೆ ಇದಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಉತ್ತರಾ ಖಂಡ್ ನಲ್ಲಿ ಪ್ರವಾಹ ಎದುರಾದಾಗ, ದೆಹಲಿಯ ಪ್ರತಿಯೊಬ್ಬ ಶಾಸಕರ ಪರಿಹಾರ ನಿಧಿಯಿಂದ 10 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ವರ್ಷ ಅಡ್ಡಿಪಡಿಸುತ್ತಿರುವುದು ಏಕೆ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಪ್ರವಾಹ ಉಂಟಾಗಿದ್ದು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಪ್ರತಿಯೊಬ್ಬ ಶಾಸಕನ ಪರಿಹಾರ ನಿಧಿಯಿಂದ 20 ಲಕ್ಷ ರೂಪಾಯಿ ನೀಡಲಾಗುವುದು ಎಂದು ಕಳೆದ ವಾರ ಆಮ್ ಆದ್ಮಿ ಪಕ್ಷ ಹೇಳಿತ್ತು.