ನವದೆಹಲಿ : ಒಂದು ಕಾಲದಲ್ಲಿ ದೇಶದ ಹೆಮ್ಮೆಯ ಗುರುತಾಗಿದ್ದ ಹೆಚ್.ಎಂ.ಟಿ ವಾಚ್ ಕಂಪನಿಗೆ ಬೀಗ ಜಡಿಯಲು ಸರ್ಕಾರ ನಿರ್ಧರಿಸಿದೆ.
ಕಳೆದ 14 ವರ್ಷಗಳಿಂದ ನಿರಂತರ ನಷ್ಟ ಎದುರಿಸುತ್ತಿರುವ ಹೆಚ್.ಎಂ.ಟಿ ವಾಚಸ್ ಹಾಗೂ ಹೆಚ್.ಎಂ.ಟಿ ಚಿನಾರ್ ವಾಚಸ್ ಕಂಪನಿಯನ್ನು ಕೇಂದ್ರ ಸರ್ಕಾರ ಸದ್ಯದಲ್ಲೇ ಬಂದ್ ಮಾಡಲಿದೆ.
ಹೆಚ್.ಎಂ.ಟಿ ಕಂಪನಿ ಮುಚ್ಚುವಂತೆ ಈಗಾಗಲೇ ಸಾರ್ವಜನಿಕ ಉದ್ದಿಮೆಗಳ ಪುನಾರಚನಾ ಮಂಡಳಿ ಶಿಫಾರಸು ಮಾಡಿದೆ. ಕಂಪನಿಯ ನಿರ್ದೇಶಕ ಮಂಡಳಿ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್.ಎಂ.ಟಿ ವಾಚಸ್ ಹಾಗೂ ಹೆಚ್.ಎಂ.ಟಿ ಚಿನಾರ್ ಕಂಪನಿಗಳನ್ನು ಮುಚ್ಚಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
1969ರಲ್ಲಿ ಜಪಾನ್ನ ಸಿಟಿಜನ್ ಗ್ರೂಪ್ನ ಸಹಭಾಗಿತ್ವದೊಂದಿಗೆ ಆರಂಭವಾದ ಈ ಕಂಪನಿ 2012-13ರಲ್ಲಿ ರು.242.47 ಕೋಟಿ ನಷ್ಟ ಅನುಭವಿಸಿತ್ತು.
2000ರಲ್ಲಿ ಎಚ್ಎಂಟಿ ವ್ಯಾಚ್ ಬ್ಯುಸಿನೆಸ್ ಗ್ರೂಪ್ ಅನ್ನು ಹೆಚ್ಎಂಟಿ ವಾಚಸ್ ಲಿಮಿಟೆಡ್ ಆಗಿ ಪುನರ್ ರಚನೆ ಮಾಡಲಾಗಿತ್ತು. ಆದರೂ ಕಂಪನಿಯನ್ನು ನಷ್ಟದಿಂದ ಮೇಲೆತ್ತಲು ಸಾಧ್ಯವಾಗಿಲ್ಲ.