ಮೈಸೂರು : 'ಕಾಂಗ್ರೆಸ್' ಪಕ್ಷ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಕೇಳುವುದು ತಪ್ಪು ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಎಸ್.ಎಂ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 99ನೇ ಜನ್ಮದಿನೋತ್ಸವದ ಅಂಗವಾಗಿ ಸೆ.10ರಂದು ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿರುವ ಎಸ್.ಎಂ ಕೃಷ್ಣ, ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಕೇಳುವುದು ಸರಿಯಲ್ಲ, ನಮಗಾಗಿ ನಿಯಮ ಬದಲಾವಣೆ ಮಾಡಿ ಎಂದು ಹೇಳುವುದು ತಪ್ಪು. ಪ್ರಜಾಪ್ರಭುತ್ವದ ನಿಯಮವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ನಿಯಮದ ಪ್ರಕಾರ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ಪಡೆಯಲು ಸಂಸತ್ ನಲ್ಲಿ ಶೇ.10ರಷ್ಟು ಸ್ಥಾನ ಹೊಂದಿರಬೇಕು, ಆದರೆ ಕಾಂಗ್ರೆಸ್ ಗೆ ದೊರೆತಿರುವುದು ಕೇವಲ 44 ಸ್ಥಾನ ಮಾತ್ರ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನಕ್ಕೆ ಬೇಡಿಕೆ ಇಡುತ್ತಿರುವುದು ಸರಿಯಲ್ಲ ಎಂದು ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತಿದ್ದರೆ ಪಕ್ಷದ ಹಿರಿಯ ಮುಖಂಡ ಕೃಷ್ಣ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.