ರಾಯ್ ಬರೇಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದು 100 ದಿನಗಳು ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಕ್ರಿಯೆ ನೀಡಿದ್ದು ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.
ತಾವು ಪ್ರತಿನಿಧಿಸುತ್ತಿರುವ ರಾಯ್ ಬರೇಲಿ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ಸೋನಿಯಾ ಗಾಂಧಿ, ಮೋದಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದು 100 ದಿನಗಳು ಪೂರ್ಣಗೊಳ್ಳಲಿವೆ. ಆದರೆ ಇನ್ನೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಡಿಮೆಯಾಗಿಲ್ಲ ಎಂದು ಆರೋಪಿಸಿದ್ದಾರೆ.
ಬೆಲೆ ಏರಿಕೆ ಕಡಿಮೆ ಮಾಡುವುದಾಗಿ ಭರವಸೆ ನೀಡಿದ್ದ ಮೋದಿ ಸರ್ಕಾರ ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ಕ್ಷೇತ್ರದ ಜನತೆ ಪ್ರಶ್ನಿಸಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್ ನ ನಾಯಕರು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೋಮುಗಲಭೆಗಳು ಹೆಚ್ಚಾಗುತ್ತಿರುವುದರ ಬಗ್ಗೆ ಮಾತ್ರ ಮೋದಿ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಎ.ಐ.ಸಿ.ಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೋಮುಗಲಭೆಗಳ ವಿಷಯವನ್ನು ಬಿದಿಗಿಟ್ಟು ಬೆಲೆ ಏರಿಕೆ ವಿಷಯ ಪ್ರಸ್ತಾಪಿಸಿರುವುದು ವಿಶೇಷವಾಗಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಲು ಬೆಲೆ ಏರಿಕೆ ವಿಷಯವನ್ನೇ ಪ್ರಧಾನವಾಗಿ ಸ್ವೀಕರಿಸುತ್ತಿದ್ದರು. ಪ್ರತಿ ಭಾಷಣದಲ್ಲೂ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಬೆಲೆ ಏರಿಕೆ ಕಡಿಮೆ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಿಸದೇ ಇರುವುದನ್ನು ದೇಶದ ಜನತೆಗೆ ನೆನಪಿಸುತ್ತಿದ್ದರು.
ಇದೀಗ ವಿಪಕ್ಷ ಸ್ಥಾನ ಪಡೆಯಲೂ ಅನರ್ಹವಾಗಿರುವ ಕಾಂಗ್ರೆಸ್ ನ ಅಧಿನಾಯಕಿ ಸೋನಿಯಾ ಗಾಂಧಿ ಮೋದಿ ಸರ್ಕಾರವನ್ನು ಹಣಿಯಲು ಬೆಲೆ ಏರಿಕೆ ವಿಷಯವನ್ನೇ ಪ್ರಸ್ತಾಪಿಸುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಲೂ ಪ್ರಧಾನಿ ಮೋದಿ ಅವರನ್ನು ಅನುಕರಣೆ ಮಾಡಿದ್ದಾರೆ.