ನವದೆಹಲಿ : ಹಿಂದಿ, ಕೊಂಕಣಿ, ಮರಾಠಿ ಸೇರಿದಂತೆ 8 ಭಾಷೆಗಳನ್ನೊಳಗೊಂಡ .ಭಾರತ್ ಡೊಮೇನ್ (.Bharat domain) ಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಇದೇ ಪ್ರಥಮ ಬಾರಿಗೆ ದೇವನಾಗರಿ ಭಾಷೆಯಲ್ಲಿ .ಭಾರತ್(.Bharat) ಡೊಮೇನ್ ನ್ನು ಆರಂಭಿಸಲಾಗಿದೆ.
ಭಾರತ ಸರ್ಕಾರ ಚಾಲನೆ ನೀಡಿರುವ .ಭಾರತ್ ಡೊಮೇನ್ ಮೂಲಕ ಯಾವುದೇ ಕಂಪನಿಗಳು ಹಿಂದಿ
ಲಿಪಿಯಲ್ಲಿ ವೆಬ್ ಸೈಟ್ ಹೆಸರನ್ನು ಪಡೆಯಬಹುದಾಗಿದೆ. ಜಾಲತಾಣಗಳ ವಿಳಾಸ, ಅರ್ಥಾತ್ ಯು.ಆರ್.ಎಲ್ ಅನ್ನು ಇಂಗ್ಲಿಷಿನ ಬದಲು ನಮ್ಮದೇ ಭಾಷೆಯಲ್ಲಿ ಇಟ್ಟುಕೊಳ್ಳಲು .ಭಾರತ್ ಡೊಮೇನ್ ಅನುವುಮಾಡಿಕೊಡಲಿದೆ.
ಸಾಮಾನ್ಯವಾಗಿ ಯಾವುದೇ ವೆಬ್ ಸೈಟ್ ಗಳು .ಕಾಂ, .ಇನ್, .ನೆಟ್(Com, .Net or .In.) ಎಂಬ ಡೊಮೇನ್ ಮೂಲಕ ಇಂಗ್ಲಿಷ್ ಲಿಪಿಯಲ್ಲೇ ಹೆಸರು ಹೊಂದಿರುತ್ತಿದ್ದವು. ಆದರೆ ಭಾರತ ಸರ್ಕಾರದ ಈ ಕ್ರಮದಿಂದಾಗಿ .ಭಾರತ್(.bharat) ಡೊಮೇನ್ ಮೂಲಕ ಹಿಂದಿ, ಕೊಂಕಣಿ, ಮರಾಠಿ ಸೇರಿದಂತೆ 8 ವಿವಿಧ ಭಾಷೆಗಳ ಲಿಪಿಯಲ್ಲಿಯೇ ವೆಬ್ ಸೈಟ್ ಹೆಸರನ್ನು ಪಡೆಯಬಹುದಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾನೂನು, ಮಾಹಿತಿ ತಂತ್ರಜ್ನಾನ ಸಚಿವ ರವಿಶಂಕರ್ ಪ್ರಸಾದ್, .ಭಾರತ್ ಡೊಮೇನ್ ಹೆಸರನ್ನು ದೇಶದ ಎಲ್ಲಾ ಭಾಷೆಗಳಲ್ಲೂ ದೊರೆಯುವಂತೆ ಮಾಡಲು ಮಾಹಿತಿ ಮತ್ತು ತಂತ್ರಜ್ನಾನ ಇಲಾಖೆಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಭಾರತದ ರಾಷ್ಟ್ರೀಯ ಇಂಟರ್ನೆಟ್ ವಿನಿಮಯ (NIXI) ಶೀಘ್ರದಲ್ಲೇ ಬಾಂಗ್ಲಾ, ಉರ್ದು, ಪಂಜಾಬಿ, ತೆಲುಗು, ತಮಿಳು ಹಾಗೂ ಗುಜರಾತಿ ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಅಂತಾರಾಷ್ಟ್ರೀಕೃತ ಡೊಮೇನ್ ಹೆಸರು (ಐಡಿಎನ್) ಆರಂಭಿಸುತ್ತೇವೆ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾಹಿತಿ ತಂತ್ರಜ್ನಾನ ಬಳಕೆಯ ಪ್ರತಿಪಾದಕರಾಗಿದ್ದು, ಐಟಿ ಕ್ಷೇತ್ರದಲ್ಲಿ ಭಾರತವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂಬುದು ಈ ಬೆಳವಣಿಗೆ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.
ಪ್ರಸಕ್ತ ವರ್ಷದಲ್ಲಿ ದೇಶದ 60ಸಾವಿರ ಹಳ್ಳಿಗಳಿಗೆ ಬ್ರಾಡ್ ಬ್ಯಾಂಡ್ ಸೌಲಭ್ಯ ನೀಡಲಾಗುತ್ತದೆ ಎಂದು ಇದೇ ವೇಳೆ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. 2017ರ ವೇಳೆಗೆ 2.50 ಲಕ್ಷ ಗ್ರಾಮ ಪಂಚಾಯತ್ ಗಳಿಗೆ ಹೈ-ಸ್ಪೀಡ್ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ ಇದಕ್ಕಾಗಿ 35 ಸಾವಿರ ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.