ನವದೆಹಲಿ : ಕಳೆದ ಡಿಸೆಂಬರ್ ನಲ್ಲಿ ಜಾರಿಗೆ ಬಂದಿರುವ ಭ್ರಷ್ಟಾಚಾರ ನಿಗ್ರಹ ಲೋಕಪಾಲ್ ಮಸೂದೆ ಪ್ರಕಾರ ಆಸ್ತಿ ವಿವರ ಘೋಷಣೆ ಮಾಡಬೇಕೆಂದು ಎಲ್ಲಾ ಸರ್ಕಾರಿ ನೌಕರರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸೂಚನೆ ನೀಡಿದೆ.
ಸರ್ಕಾರಿ ಕಚೇರಿಗಳಲ್ಲಿ ಡಿ. ಗ್ರೂಪ್ ನೌಕರರನ್ನು ಹೊರತುಪಡಿಸಿ ಉಳಿದೆಲ್ಲಾ ಹುದ್ದೆಯ ನೌಕರರು ಕಡ್ಡಾಯವಾಗಿ ತಮ್ಮ ಆಸ್ತಿ ವಿವರ ಘೋಷಣೆ ಮಾಡಬೇಕು ಎಂದು ಸರ್ಕಾರ ಆದೇಶ ನೀಡಿದೆ. ಸರ್ಕಾರದ ಆದೇಶದ ಪ್ರಕಾರ 23 ಲಕ್ಷ ಸರ್ಕಾರಿ ನೌಕರರು ಸೆ.15ರೊಳಗೆ ತಮ್ಮ ಕುಟುಂಬದ ಆಸ್ತಿ ವಿವರವನ್ನು ಘೋಷಣೆ ಮಾಡಬೇಕಿದೆ.
ಹೊಸದಾಗಿ ಸರ್ಕಾರಿ ನೌಕರಿಗೆ ಸೇರುವವರೂ ಸಹ ಇನ್ನು ಮುಂದೆ ತಮ್ಮ ಕುಟುಂಬದ ಆಸ್ತಿ, ತಾವು ಹೊಂದಿರುವ ವಾಹನ, ಚಿನ್ನಾಭರಣ, ಬಾಂಡ್, ವಯಕ್ತಿಕ ಲೋನ್, ವಿವಿಧ ಕಂಪನಿಗಳಲ್ಲಿ ಹೊಂದಿರುವ ಷೇರುಗಳ ಬಗ್ಗೆ ವಿವರಣೆ ನೀಡುವುದು ಕಡ್ಡಾಯವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಸಚಿವರು ಆಸ್ತಿ ವಿವರ ಘೋಷಿಸಬೇಕೆಂದು ಸೂಚನೆ ನೀಡಲಾಗಿತ್ತು. ಅಲ್ಲದೇ ಯಾವುದೇ ಸಭೆ ಸಮಾರಂಭಗಳಲ್ಲಿ ದೊರೆಯುವ ಉಡುಗೊರೆಗಳನ್ನು ಸ್ವೀಕರಿಸಬಾರದೆಂಬ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.