ಬೆಂಗಳೂರು : ಆ.25ರಂದು ಉಪಚುನಾವಣೆ ಫಲಿತಾಂಶ
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಆ.25ರಂದು ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ಆ.21ರಂದು ನಡೆದ ಬಳ್ಳಾರಿ ಗ್ರಾಮಾಂತರ, ಶಿಕಾರಿಪುರ ಹಾಗೂ ಚಿಕ್ಕೋಡಿ-ಸದಲಗಾ ಕ್ಷೇತ್ರಗಳ ಚುನಾವಣೆಯ ಫಲಿತಾಂಶ ಆ.25ರಂದು ಪ್ರಕಟವಾಗಲಿದ್ದು, ಬೆಳಿಗ್ಗೆ 8ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಬಳ್ಳಾರಿ ಕ್ಷೇತ್ರದ ಮತ ಎಣಿಕೆ ಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ. ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಶಿವಮೊಗ್ಗದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದೆ. ಚಿಕ್ಕೋಡಿ ವಿಧಾನಸಭಾ ಕ್ಷೇತ್ರದ ಮತಎಣಿಕೆ ಚಿಕ್ಕೋಡಿಯ ಆರ್.ಡಿ.ಸಂಯುಕ್ತ ಕಿರಿಯ ಕಾಲೇಜಿನಲ್ಲಿ ನಡೆಯಲಿದೆ. ಮತ ಎಣಿಕೆ ಹಿನ್ನಲೆಯಲ್ಲಿ ಮತಗಟ್ಟೆ ಸುತ್ತಮುತ್ತ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಬಳ್ಳಾರಿ ಕ್ಷೇತ್ರದಲ್ಲಿ ಶೇ.73.30ರಷ್ಟು ಮತದಾನವಾಗಿದ್ದು ಬಿಜೆಪಿಯ ಓಬಳೇಶ್ ಹಾಗೂ ಕಾಂಗ್ರೆಸ್ ನ ಎಂ.ವೈ.ಗೋಪಾಲಕೃಷ್ಣ ಅವರ ನಡುವೆ ನೇರ ಹಣಾಹಣಿ ಉಂಟಾಗಿತ್ತು. ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.78.26ರಷ್ಟು ಮತದಾನವಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ ರಾಘವೇಂದ್ರ ಹಾಗೂ ಕಾಂಗ್ರೆಸ್ ನ ಶಾಂತವೀರಪ್ಪ ಗೌಡ ಅವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದರೆ, ಚಿಕ್ಕೋಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.83.53ರಷ್ಟು ಮತದಾನವಾಗಿತ್ತು. ಈ ಕ್ಷೇತ್ರದಲ್ಲಿ ಸಂಸದ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ಹಾಗೂ ಬಿಜೆಪಿಯ ಮಹಂತೇಶ್ ಕಟವಟಗಿಮಠ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.
ಮತ ಎಣಿಕೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಗೆಲುವು ಯಾವ ಪಕ್ಷಕ್ಕೆ ಸಿಗಲಿದೆ ಎಂಬುದನ್ನು ಕಾದುನೋಡಬೇಕು.