ನವದೆಹಲಿ : ಯುಪಿಎಸ್ ಸಿ ಅಭ್ಯರ್ಥಿಗಳು ಪ್ರಾಥಮಿಕ ಪ್ರವೇಶ ಪರೀಕ್ಷೆ ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಸಿವಿಲ್ ಸರ್ವಿಸ್ ಯೋಗ್ಯತಾ ಪರೀಕ್ಷೆ(CSAT)ವಿವಾದ ಹಿನ್ನಲೆಯಲ್ಲಿ ಆ.24ರಂದು ನಡೆಯಬೇಕಿದ್ದ ಯುಪಿಎಸ್ ಸಿ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಅಭ್ಯರ್ಥಿಗಳು ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆ.24ರಂದು ನಿಗದಿಯಾಗಿರುವ ಪರೀಕ್ಷೆಯಲ್ಲಿ 9 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಪರೀಕ್ಷೆ ಮುಂದೂದಲು ಅಥವಾ ವೇಳಾಪಟ್ಟಿ ಬದಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಯುಪಿಎಸ್ ಸಿ ಪ್ರವೇಶ ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ ದೆಹಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆ.22ರಂದು ಪಿಐಎಲ್ ವಜಾಗೊಳಿಸಿತ್ತು. ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಯುಪಿಎಸ್ ಸಿಯಲ್ಲಿ ಸಿವಿಲ್ ಸರ್ವಿಸ್ ಯೋಗ್ಯತಾ ಪರೀಕ್ಷೆ(CSAT)ಯಿದ್ದು, ಇದನ್ನು ಇಂಗ್ಲೀಷಿನಲ್ಲಿಯೇ ಬರೆಯುವುದು ಕಡ್ಡಾಯವಾಗಿದೆ. ಇದರಿಂದಾಗಿ ಹಿಂದಿ ಭಾಷಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹಿಂದಿ ಭಾಷೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಯುಪಿಎಸ್ ಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವಿಚಾರ ಸಂಸತ್ ಕಲಾಪದಲ್ಲಿಯೂ ಪ್ರತಿಧ್ವನಿಸಿತ್ತು.