ವಾಷಿಂಗ್ಟನ್ : 'ಪ್ರಧಾನಿ'ಯಾದ ಬಳಿಕ ಪ್ರಥಮ ಬಾರಿಗೆ ಅಮೆರಿಕಗೆ ಭೇಟಿ ನೀಡಲಿರುವ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲು ಅಲ್ಲಿ ನೆಲೆಸಿರುವ ಭಾರತ ಸಂಜಾತ ಪ್ರಜೆಗಳು ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ತುದಿಗಾಲಲ್ಲಿ ನಿಂತಿದ್ದು ಸಕಲ ಸಿದ್ಧತೆಗಳೂ ನಡೆದಿವೆ. ಮ್ಯಾನ್ಹ್ಯಾಟನ್ ನಲ್ಲಿರುವ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ಸೆ.28ರಂದು ಪ್ರಧಾನಿ ನರೇಂದ್ರ ಮೋದಿ 20000 ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಮೋದಿ ಆಗಮನಕ್ಕಾಗಿ ಕಾಯುತ್ತಿರುವ ಅನಿವಾಸಿ ಭಾರತೀಯರು, pmvisit.org ಎಂಬ ವೆಬ್ ಸೈಟ್ ಆರಂಭಿಸಿದ್ದಾರೆ. ಈ ವೆಬ್ ಸೈಟ್ ಮುಖಾಂತರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಅತಿ ಹೆಚ್ಚು ಜನರು ಪಾಲ್ಗೊಳ್ಳುವಂತೆ ಭಾರತೀಯರನ್ನು ಸೆಳೆಯುತ್ತಿದೆ.
ಪ್ರಧಾನಿಗೆ ಅದ್ದೂರಿ ಸ್ವಾಗತ ನೀಡಲು ತಯಾರಿ ನಡೆಸಿರುವ ಇಂಡಿಯನ್ ಅಮೆರಿಕನ್ ಕಮ್ಯುನಿಟಿ ಫೌಂಡೇಶನ್(IAC)ಸಂಘಟನೆ, ಕಾರ್ಯಕ್ರವನ್ನು ಯಶಸ್ವಿಗೊಳಿಸಲು ಅಮೆರಿಕದಾದ್ಯಂತ ಇರುವ ಭಾರತೀಯರಿಂದ pmvisit.org ಮೂಲಕ ಸಲಹೆ ಪಡೆಯುತ್ತಿದೆ. ವೆಬ್ ಸೈಟ್ ಮೂಲಕ ಕಾರ್ಯಕ್ರಮಕ್ಕೆ ಅಗತ್ಯವಿರುವ ಪಾಸ್ ಗಳನ್ನೂ ನೊಂದಾಯಿಸುವ ಅವಕಾಶ ಕಲ್ಪಿಸಲಾಗಿದೆ.
ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಸಹ ತುದಿಗಾಲಲ್ಲಿ ನಿಂತಿದ್ದಾರೆ. ಅಮೆರಿಕಾಗೆ ಮೋದಿ ಭೇಟಿ ಅನಿವಾಸಿ ಭಾರತೀಯಲ್ಲಿ ಸಂಚಲನ ಮೂಡಿಸಿದ್ದು ನೆಚ್ಚಿನ ಪ್ರಧಾನಿ ಆಗಮನವನ್ನು ನಿರೀಕ್ಷಿಸುತ್ತಿದ್ದಾರೆ.