ನವದೆಹಲಿ : 'ಕಾಂಗ್ರೆಸ್' ಗೆ ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಆ.19ರಂದು ಅಧಿಕೃತ ಹೇಳಿಕೆ ನೀಡಿದ್ದಾರೆ.
ಲೋಕಸಭೆಯಲ್ಲಿ ಪ್ರತಿಪಕ್ಷ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷ ಕಳೆದ ತಿಂಗಳು ಲೋಕಸಭಾ ಸ್ಪೀಕರ್ ಗೆ ಮನವಿ ಸಲ್ಲಿಸಿತ್ತು. ಮನವಿ ಪರಿಶೀಲಿಸುವುದಾಗಿ ಸ್ಪೀಕರ್ ಸುಮಿತ್ರಾ ಮಹಾಜನ್ ಭರವಸೆ ನೀಡಿದ್ದರು. ಕಾಂಗ್ರೆಸ್ ಗೆ ಪ್ರತಿಪಕ್ಷ ಸ್ಥಾನ ನೀಡುವುದರ ಬಗ್ಗೆ ಅಟಾರ್ನಿ ಜನರಲ್ ಅಭಿಪ್ರಾಯ ಪಡೆದು ಸುಮಿತ್ರಾ ಮಹಾಜನ್ ಅಧಿಕೃತ ನಿರ್ಧಾರ ಪ್ರಕಟಿಸಿದ್ದಾರೆ.
ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನ ಪಡೆಯಲು ಯಾವುದೇ ಪಕ್ಷಕ್ಕೆ 55 ಲೋಕಸಭಾ ಸದಸ್ಯರ ಸಂಖ್ಯಾಬಲ ಅಗತ್ಯವಿರುತ್ತದೆ. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕೇವಲ 44 ಸ್ಥಾನ ದೊರೆತಿದ್ದು ಪ್ರತಿಪಕ್ಷ ಸ್ಥಾನ ಪಡೆಯಲು ಕಾಂಗ್ರೆಸ್ ಅನರ್ಹವಾಗಿದೆ.
ಕಾಂಗ್ರೆಸ್ ಗೆ ಪ್ರತಿಪಕ್ಷ ಸ್ಥಾನ ನೀಡುವ ಬಗ್ಗೆ ಸ್ಪೀಕರ್ ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂದು ಬಿಜೆಪಿ ನಾಯಕರು ಹೇಳಿದ್ದರು. ಸ್ಪೀಕರ್ ನಿರ್ಧಾರದಿಂದ ಕಾಂಗ್ರೆಸ್ ಗೆ ಸೋಲಿನ ಜೊತೆಗೆ ತೀವ್ರ ಮುಖಭಂಗವೂ ಆದಂತಾಗಿದೆ.