ಬಾಗ್ದಾದ್ : 'ಇರಾಕ್' ಉಗ್ರ ಸಂಘಟನೆ ಐ.ಎಸ್.ಐ.ಎಸ್ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕದವರ ಮೇಲೆ ಯಾವುದೇ ಪ್ರದೇಶದಲ್ಲಿ ದಾಳಿ ನಡೆಸುವುದಾಗಿ ಐ.ಎಸ್.ಐ.ಎಸ್ ಎಚ್ಚರಿಕೆ ನೀಡಿದೆ.
ಐ.ಎಸ್.ಐ.ಎಸ್ ಮೇಲೆ ಮಿಲಿಟರಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಇತ್ತೀಚೆಗಷ್ಟೇ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಐ.ಎಸ್.ಐ.ಎಸ್, ಅಮೆರಿಕಾ ನಡೆಸುತ್ತಿರುವ ವಾಯುದಾಳಿಯಲ್ಲಿ ತನ್ನ ಸಂಘಟನೆಯವರು ಸಿಲುಕಿಕೊಂಡರೆ ಅಮೆರಿಕಾದವರನ್ನು ರಕ್ತದ ಮಡುವಿನಲ್ಲಿ ಮುಳುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಇರಾಕ್ ನಲ್ಲಿ ಅಮೆರಿಕ ಸೇನಾ ನೆಲೆ ಸ್ಥಾಪಿಸಿದ್ದ ಸಂದರ್ಭದಲ್ಲಿ ಯು.ಎಸ್ ನಾಗರಿಕನೋರ್ವನ ತಲೆ ಕತ್ತರಿಸುತ್ತಿರುವ ವಿಡಿಯೋ ಬಿಡುಗಡೆ ಮಾಡಿ ಅದೇ ಮಾದರಿಯಲ್ಲಿ ಅಮೆರಿಕನ್ನರನ್ನು ರಕ್ತದ ಮಡುವಿನಲ್ಲಿ ಮುಳುಗಿಸುವುದಾಗಿ ಐ.ಎಸ್.ಐ.ಎಸ್ ಎಚ್ಚರಿಸಿದೆ.
ಉತ್ತರ ಇರಾಕಿನಲ್ಲಿ ನೆಲೆಸಿರುವ ತನ್ನ ನಾಗರಿಕರನ್ನು ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ ಅಮೆರಿಕ ವಾಯುದಾಳಿ ನಡೆಸಿತ್ತು. ಇಸ್ಲಾಂ ಉಗ್ರರಿಂದ ಆಕ್ರಮಿತಗೊಂಡಿದ್ದ ಕುರ್ದಿಶ್ ಪ್ರದೇಶವನ್ನು ವಾಪಸ್ ಪಡೆಯಲು ಅಲ್ಲಿನ ಹೋರಾಟಗಾರರಿಗೆ ವಾಯುದಾಳಿ ಸಹಾಯಕವಾಗಿತ್ತು. ಈ ಹಿನ್ನೆಲೆಯಲ್ಲಿ ಐ.ಎಸ್.ಐ.ಎಸ್ ಎಚ್ಚರಿಕೆ ನೀಡಿದೆ.