ಬೆಂಗಳೂರು : ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(ಕೆ.ಎಸ್.ಪಿ.ಸಿ.ಬಿ) ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಮಿತಿ ಮೀರುತ್ತಿರುವುದನ್ನು ತಡೆಗಟ್ಟಲು ಕೆ.ಎಸ್.ಪಿ.ಸಿ.ಬಿ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹೈಕೋರ್ಟ್ ಹೇಳಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚುತ್ತಿರುವುದಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೈಗೊಂಡಿರುವ ಕ್ರಮಗಳೇನು ಎಂದು ಕೋರ್ಟ್ ಪ್ರಶ್ನಿಸಿದೆ. ಇದೇ ವೇಳೆ ಮಾಲಿನ್ಯಕ್ಕೆ ಕಾರಣವಾಗಿರುವ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಸಂಸ್ಥೆಗಳಿಗೆ ಮಾಲಿನ್ಯ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಬೇಕೆಂದು ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.
ರಾಜ್ಯ ಪರಿಸರ ಮಾಲಿನ್ಯ ಮಂಡಳಿ ವೈಫಲ್ಯದ ಹಿನ್ನೆಲೆಯಲ್ಲಿ, ಹೈಕೋರ್ಟ್, ಕೆ.ಎಸ್.ಪಿ.ಸಿ.ಬಿಯನ್ನು ಸೂಪರ್ ಸೀಡ್ ಮಾಡುವ ಎಚ್ಚರಿಕೆ ನೀಡಿದ್ದು ಈ ಬಗ್ಗೆ ಉತ್ತರಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.