ಮುಂಬೈ : ಐ.ಎನ್.ಎಸ್ ಯುದ್ಧ ನೌಕೆ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ
ದೇಶದ ಅತಿ ದೊಡ್ಡ ಯುದ್ಧ ನೌಕೆ ಐ.ಎನ್.ಎಸ್ ಕೊಲ್ಕತ್ತಾ ಯುದ್ಧ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ.
ವಾಣಿಜ್ಯ ನಗರಿ ಮುಂಬೈ ಕರಾವಳಿಯಲ್ಲಿ ಅತ್ಯಾಧುನಿಕ, ಸ್ವದೇಶಿ ನಿರ್ಮಿತ ಯುದ್ಧ ನೌಕೆ ಐ.ಎನ್.ಎಸ್ ಕೊಲ್ಕತ್ತಾ ವನ್ನು ಪ್ರಧಾನಿ ಮೋದಿ ದೇಶಸಕ್ಕೆ ಸಮರ್ಪಿಸಿದರು. ರಕ್ಷಣಾ ಸಚಿವ ಅರುಣ್ ಜೇಟ್ಲಿ, ನೌಕಾಪಡೆ ಮುಖ್ಯಸ್ಥ ಆರ್.ಕೆ.ಧವನ್, ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 6,800 ಟನ್ ತೂಕವನ್ನು ಹೊಂದಿರುವ ಐ.ಎನ್.ಎಸ್ ಯುದ್ಧ ನೌಕೆ ಸ್ವದೇಶಿ ನಿರ್ಮಿತ ಯುದ್ಧ ನೌಕೆಯಾಗಿದ್ದು, ಇದು ದೇಶದಲ್ಲಿಯೇ ಅತಿ ದೊಡ್ಡ ಯುದ್ಧ ನೌಕೆ ಎಂಬುದು ಹೆಮ್ಮೆಯ ಸಂಗತಿ ಎಂದರು.
ಸೇನಾಪಡೆಗಳು ಸ್ವತಂತ್ರ್ಯ ಭಾರತದ ರಕ್ಷಣೆ ಮಾಡುತ್ತಿವೆ. ಭೂಸೇನೆ, ವಾಯುಸೇನೆ, ನೌಕಾಪಡೆಗಳು ದೇಶವನ್ನು ರಕ್ಷಿಸುತ್ತಿವೆ. ಭಾರತದ ತಂತ್ರಜ್ನರು, ಕಾರ್ಮಿಕರು ಈ ಯುದ್ಧ ನೌಕೆಯನ್ನು ನಿರ್ಮಿಸಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಇಡೀ ಜಗತ್ತಿಗೆ ಭಾರತದ ಶಕ್ತಿ ತೋರಿಸುವ ಕಾಲ ಬಂದಿದೆ. ಆದರೆ ಯುದ್ಧದ ಮೂಲಕವೇ ಭಾರತದ ಶಕ್ತಿ ತೋರಿಸಬೇಕೆಂದಿಲ್ಲ, ನಮ್ಮಲ್ಲಿರುವ ಆಧುನಿಕ ತಂತ್ರಜ್ನಾನದ ಮುಲಕ ತೋರಿಸಬೇಕಿದೆ. ಐ.ಎನ್.ಎಸ್ ಕೊಲ್ಕತ್ತಾ ಯುದ್ಧ ನೌಕೆ ಮೂಲಕ ಭಾರತದ ಶಕ್ತಿ ಕಂಡುಬರುತ್ತಿದೆ. ಅದು ನಮ್ಮ ಬಾಹುಬಲ, ಬುದ್ಧಿಬಲದಿಂದ ಸಾಬೀತಾಗಿದೆ. ಇಡೀ ಜಗತ್ತು ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ಇಂದು ಭಾರತದ ಪಾಲಿಗೆ ಐತಿಹಾಸಿಕ ದಿನ ಎಂದರು.