Untitled Document
Sign Up | Login    
Dynamic website and Portals
  
Home >> Movie Home >> Reviews >> ಬ್ರಹ್ಮ
Movie Review
ಬ್ರಹ್ಮ
ಗೊಂದಲದ ಬ್ರಹ್ಮ ಸೃಷ್ಠಿ...
Rating :
Hero :
ಉಪೇಂದ್ರ
Heroine :
ಪ್ರಣೀತ
Other Cast :
ರಂಗಾಯಣ ರಘು, ಸಾಧು ಕೋಕಿಲ, ಶೈಯಾಜಿ ಶಿಂದೆ, ನಜರ್, ರಾಹುಲ್,ಸೋನು ಸೂದ್, ಅನಂತನಾಗ್, ಬುಲೇಟ್ ಪ್ರಕಾಶ್, ಪದ್ಮಜಾ ರಾವ್, ಸುರೇಶ್, ಲಕ್ಷ್ಮಣ್ ಮತ್ತು ಮುಂತಾದವರು.
Director :
ಚಂದ್ರು
Music Director :
ಗುರುಕಿರಣ್
Producer :
ಮೈಲಾರಿ ಎಂಟರ್ ಪ್ರೈಸಸ್
Release Date :
07-02-2014
ನಟ ಉಪೇಂದ್ರರನ್ನು ನಿರ್ದೇಶಿಸಲು ಹೊರಟ ಇನ್ನೊಬ್ಬ ನಿರ್ದೇಶಕ, ನಿರ್ದೇಶಕ ಉಪೇಂದ್ರರಂತೆ ಯೋಚಿಸಿದರೆ ಏನಾಗುತ್ತದೆ..? ಬ್ರಹ್ಮ ಚಿತ್ರ ತಯಾರಾಗುತ್ತದೆ. ಹೌದು.. ಇದು ಆರ್. ಚಂದ್ರು ನಿರ್ದೇಶನದ ಬ್ರಹ್ಮ ಚಿತ್ರದ ಒನ್ ಲೈನ್ ವಿಮರ್ಶೆ.

ಉಪೇಂದ್ರ ಈ ಹಿಂದೆ ತಾವೇ ನಿರ್ದೇಶಿಸಿ ನಟಿಸಿದ್ದ್ದ ಸೂಪರ್ ಚಿತ್ರದ ಇನ್ನೊಂದು ಅವತರಣಿಕೆಯಂತೆ ಬ್ರಹ್ಮ ಚಿತ್ರ ಕಾಣುತ್ತದೆ. ಈ ಹಿಂದೆ ತಮ್ಮದೇ ಶೈಲಿಯ ಚಿತ್ರಗಳಿಂದ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಚಂದ್ರು ಈ ಚಿತ್ರದಲ್ಲಿ ನಿರಾಸೆ ಮಾಡುತ್ತಾರೆ. ಭ್ರಷ್ಟ ವ್ಯವಸ್ಥೆಯನ್ನು ಹೆಡೆಮುರಿ ಕಟ್ಟುವ ತಂತ್ರ ಹೆಣೆದು ಅದರಲ್ಲಿ ಯಶಸ್ವಿಯಾಗುವ ನಾಯಕ ಕೇಂದ್ರಿತ ಕಥಾನಕಗಳು ಕನ್ನಡಕ್ಕೆ ಹೊಸದೇನಲ್ಲ. ೮೦ರ ದಶಕದಲ್ಲೇ ಬಂದ ಅಂತ ಚಿತ್ರ ದೇಶಾದ್ಯಂತ ಹೊಸ ಸಂಚಲನವನ್ನೇ ಸೃಷ್ಟಿಸಿತು. ನಂತರ ಅದೇ ಮಾದರಿಯ ಹಲವು ಚರ್ವಿತಚರ್ವಣ ಚಿತ್ರಗಳು ಬಂದು ಹೋದವು. ಬ್ರಹ್ಮ ಇದೇ ಸಾಲಿನಲ್ಲಿರುವ ಮತ್ತೊಂದು ಚಿತ್ರ.

ಮಲೇಷಿಯಾದಲ್ಲಿ ಕೊಲ್ಲಲ್ಪಡುವ ಡಾನ್ ರಾಹುಲ್ ದೇವ್‌ನ ಹೆಂಡತಿ ನಾಯಕಿ ಬ್ರಹ್ಮನನ್ನು ಕೊಲ್ಲುವ ಉದ್ದೇಶದಿಂದ ಕರ್ನಾಟಕಕ್ಕೆ ಬಂದಿಳಿಯುತ್ತಾಳೆ. ಆತನನ್ನು ಹುಡುಕಿಕೊಂಡು ಕ್ಯಾಬ್ ಹತ್ತಿ ಹೊರಡುವ ಆಕೆಗೆ ಬ್ರಹ್ಮ ಅಂದರೆ ಯಾರೆಂದು ಕ್ಯಾಬ್ ಡ್ರೈವರ್ ಕಥೆ ಹೇಳುತ್ತಾನೆ. ಇಲ್ಲಿಂದ ಶುರುವಾಗುವ ಫ್ಲ್ಯಾಷ್‌ಬ್ಯಾಕ್ ತಂತ್ರವನ್ನು ಇಡೀ ಸಿನೆಮಾದಲ್ಲಿ ಬಹಳಷ್ಟು ಪಾತ್ರಗಳು ಬೇಸರ ಹುಟ್ಟಿಸುವಷ್ಟು ಸಲ ಬಳಕೆ ಮಾಡಿಕೊಂಡಿವೆ. ಡ್ರೈವರ್ ಕತೆ ಹೇಳುವ ಕಾಲಕ್ಕೆ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿಯೇ ಕಾಲಿಗೆ ಬಿದ್ದು ಸರ್ಕಾರ ಉಳಿಸುವಂತೆ ಬೇಡಿಕೊಳ್ಳುವಷ್ಟು ಪ್ರಭಾವಿ ಕಿಂಗ್ ಮೇಕರ್ ಆಗಿರುವ ಬ್ರಹ್ಮ, ಒಂದು ಕಾಲದಲ್ಲಿ ಭಾರತ ಮತ್ತು ಮಲೇಷಿಯಾ ದೇಶಗಳ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರುತ್ತಾನೆ. ಇವುಗಳ ನಡುವೆ ನಾಯಕ ಉಪೇಂದ್ರರಿಗೆ ಮಲೇಷಿಯಾದಲ್ಲಿ ನಾಯಕಿ ಪ್ರಣೀತಾಳೊಂದಿಗೆ ಪ್ರೇಮಾಂಕುರವಾಗಿ ಇಡೀ ಚಿತ್ರದಲ್ಲಿ ನಾಯಕನನ್ನು ಹುಡುಕಿಕೊಂಡು ಬರುತ್ತಾಳೆ. ಅಲ್ಲಿಂದ ಕತೆಯಲ್ಲಿ ಹೊಸ ತಿರುವು ಪ್ರಾಂಭವಾಗುತ್ತದೆ. ಆ ತಿರುವುಗಳೇನು..? ಐತಿಹಾಸಿಕ ರಾಜ ಬ್ರಹ್ಮ ಏಕೆ ಬರುತ್ತಾನೆ..? ಅದಕ್ಕೂ ಇದಕ್ಕೂ ಏನು ಸಂಬಂಧ?॒ಬ್ರಹ್ಮ ನಿಜವಾಗಿಯು ಏನು ಹೇಳುತ್ತಾನೆ..? ಏನು ಮಾಡುತ್ತಾನೆ..? ಪೋಲಿಸರು ಎನ್ನುಮಾಡುತ್ತಾರೆ..? ಎನ್ನುವ ಪ್ರಶ್ನೆಗಳಿಗೆ ಬ್ರಹ್ಮ ಉತ್ತರ ಕೊಡುತ್ತಾನೆ.

ಗುರುಕಿರಣ್ ಪೋಣಿಸಿರುವ ನಾಲ್ಕು ಹಾಡುಗಳ ಮಟ್ಟುಗಳು ಉಪೇಂದ್ರರ ಅಭಿಮಾನಿಗಳಿಗೆ ಹೇಳಿಮಾಡಿಸಿದಂತಿವೆ. ಇದರಲ್ಲಿ ಹೆಜ್ಜೆಹಾಕಿರುವ ಪ್ರಣೀತಾ ತನ್ನ ಸ್ನಿಗ್ಧ ಸೌಂದರ್ಯದಿಂದ ನೋಡುಗರೆದೆಗೆ ಕೊಳ್ಳಿ ಇಡುತ್ತಾರೆ. ಇದನ್ನು ಹೊರತುಪಡಿಸಿ ನಾಯಕಿಗೆ ಅಭಿನಯಕ್ಕೆ ಅವಕಾಶ ಕಡಿಮೆ. ರಂಗಾಯಣ ರಘು ಲಕ್ಕಿ ಮ್ಯಾನ್ ಲುಕ್ಕಿನಿಂದ ಹಾಸ್ಯ ಉಕ್ಕಿಸುತ್ತಾರೆ. ಸಾಧು ಕೋಕಿಲ ರಘುಗೆ ಸಾಥ್ ನೀಡಿದ್ದಾರೆ. ನಾಜರ್ ತಮ್ಮ ಎಂದಿನ ಲಯದಲ್ಲಿ ಅಭಿನಯಿಸಿದ್ದಾರೆ. ಎಸಿಪಿ ಪಾತ್ರದಲ್ಲಿ ಅಭಿನಯಿಸಿರುವ ಸಯ್ಯಾಜಿ ಶಿಂಧೆ ಅನಗತ್ಯ ಬಿಗುವಿನಲ್ಲಿ ಅಭಿನಯಿಸಿದಂತೆ ತೋರುತ್ತಾರೆ. ಮೂರು ಭಾಷೆಗಳಲ್ಲಿ ತಯಾರಾಗಿರುವ ಈ ಚಿತ್ರದ ಮುಖ್ಯ ಸನ್ನಿವೇಶಗಳಲ್ಲಿ ಪಾತ್ರಗಳ ತುಟಿ ಚಲನೆ ಹೊಂದಿಕೆಯಾಗದೆ ಪ್ರೇಕ್ಷಕರಿಗೆ ಕಿರಿಕಿರಿ ಉಂಟುಮಾಡುತ್ತದೆ.

ಅತಿಯಾದ ಫ್ಲ್ಯಾಷ್‌ಬ್ಯಾಕ್‌ಗಳಿಂದ ಚಿತ್ರಕಥೆ ಸೊರಗಿದೆ. ಚಂದ್ರು ಬರೆದಿರುವ ಸಂಭಾಷಣೆಗಳು ಮೊನಚು ಕಳೆದುಕೊಂಡಿವೆ. ಉಪೇಂದ್ರ ಶೈಲಿಯ ಸಿನಿಮಾ ಎಂದರೆ ಡೈಲಾಗ್‌ಗಳು ಇರುತ್ತದೆ ಎಂದು ನೆಚ್ಚಿ ಬಂದರೆ ಅವರಿಗೆ ನಿರಾಶೆಯಾಗುವುದು ಕಂಡಿತ. ಟ್ರೇಲರ್ ನಲ್ಲಿ ನಿರೀಕ್ಷೆ ಹುಟ್ಟುಹಾಕಿದ್ದ ಉಪೇಂದ್ರರ ರಾಜನ ಪೋಷಾಕುಗಳು ಚಿತ್ರದಲ್ಲಿ ರೋಮಾಂಚನವನ್ನೇನು ಉಂಟುಮಾಡುವುದಿಲ್ಲ. ಇದು ಕೂಡ ಫ್ಲ್ಯಾಷ್‌ಬ್ಯಾಕ್‌ನ ಇನ್ನೊಂದು ತಂತ್ರವಾಗಿ ಬಳಸಲ್ಪಟ್ಟಿದೆಯಷ್ಟೆ. ಒಟ್ಟಿನಲ್ಲಿ ಅತಿಯಾದರಾಜಕೀಯ ಮಹತ್ವಾಕಾಂಕ್ಷೆಯಿರುವ ಉಪೇಂದ್ರ ಶೈಲಿಯ ಚಿತ್ರವನ್ನು ತಮ್ಮ ಶೈಲಿ ಮರೆತು ಆರ್. ಚಂದ್ರು ಕಟ್ಟಿಕೊಟ್ಟಿದ್ದಾರೆ ಎನ್ನುವುದೇ ಬ್ರಹ್ಮನ ವಿಶೇಷ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited