Untitled Document
Sign Up | Login    
Dynamic website and Portals
  
Home >> Movie Home >> Reviews >> ರಾಜಾಹುಲಿ
Movie Review
ರಾಜಾಹುಲಿ
ದೀಪಾವಳಿಗೆ ಹುಲಿ ಪಟಾಕಿ
Rating :
Hero :
ಯಶ್
Heroine :
ಮೇಘನಾ ಸುಂದರ್ ರಾಜ್
Other Cast :
ಚರಣ್ ರಾಜ್,ಯಶ್,ಮೇಘನಾ ರಾಜ್ ಮುಂತಾದವರು
Director :
ಗುರು ದೇಶಪಾಂಡೆ
Music Director :
ಹಂಸಲೇಖ
Producer :
ಕೆ.ಮಂಜು
Release Date :
01-11-2013
ನಿರ್ಮಾಪಕ ಕೆ. ಮಂಜುರವರು ಬಹು ದಿನ ಹಾಗೂ ಬಹು ಚಿತ್ರಗಳ ನಂತರ ನಿರ್ದೇಶಕ ಗುರು ದೇಶಪಾಂಡೆಯವರ ಸಹಾಯದಿಂದ ಒಂದು ಉತ್ತಮ ಮನೋರಂಜನಾ ಚಿತ್ರವನ್ನು ಕನ್ನಡ ಚಿತ್ರ ರಸಿಕರ ಪಾಲಿಗೆ ದಯಪಾಲಿಸಿದ್ದಾರೆ.
ಶಾಶ್ವತ ಗೆಳೆತನ ಮತ್ತು ತಾಜಾ ಪ್ರೇಮದ ಬಗ್ಗೆ ಈ ಮೊದಲು ಹಲವು ಚಿತ್ರಗಳು ಬಂದಿದ್ದರೂ ಈ ರಾಜಾಹುಲಿ ಚಿತ್ರ ಅವುಗಳಿಗಿಂತ ಬೇರೆಯಾಗಿಯೇ ನಿಲ್ಲುತ್ತದೆ. ನಿರೂಪಣಾ ಶೈಲಿ, ನೋಡಿಸಿಕೊಂಡುಹೋಗುವ ಗುಣದಿಂದ ಚಿತ್ರ ಗೆಲ್ಲುತ್ತದೆ.

ಸ್ನೇಹದ ಮಹತ್ವವನ್ನು ಸಾರುವ ಈ ಕಥೆ ಚಿಕ್ಕದಾದರೂ ಚೊಕ್ಕವಾಗಿದೆ. ಚಿತ್ರಕಥೆ ಇಂದಿನ ಜನತೆಗೆ ಹೇಳಿ ಮಾಡಿಸಿದಂತಿದೆ.

ಮೊದಲ ದೃಶ್ಯದಲ್ಲೇ ಅನಾಮಿಕ ಹುಡುಗಿಯೊಬ್ಬಳನ್ನು ನಿರ್ಜನ ಪ್ರದೇಶದಲ್ಲಿ ಮೂರು ಮಂದಿ ಸೇರಿ ಕೊಲೆ ಮಾಡುತ್ತಾರೆ. ನಂತರ ಆ ದೃಶ್ಯ ನಮ್ಮ ಮನಃಪಟಲದಿಂದ ಮರೆಯಾಗುವಂತೆ ಸಿನಿಮಾ ಬೇರೆಯದೇ ದಿಕ್ಕಿನಲ್ಲಿ ನುಗ್ಗುತ್ತದೆ. ಸ್ನೇಹಿತನ ಲವ್ ಗೆ ಸಹಾಯ ಮಾಡಲು ಹೋಗುವ ರಾಜಾಹುಲಿ ಅದೇ ಹುಡುಗಿಯೊಂದಿಗೆ ಪ್ರೇಮ ಪಾಶದಲ್ಲಿ ಸಿಲುಕುತ್ತಾನೆ. ಹಳ್ಳಿಗಳಲ್ಲಿ ಸಾಮಾನ್ಯವಾಗಿ ನಡೆಯುವ ಪ್ರೇಮಿಗಳ ಗಲಾಟೆಯಲ್ಲಿ ನಾಯಕಿಯ ಹಿಂದೆ ಸುತ್ತುತ್ತಿದ್ದ ಒನ್ ಸೈಡ್ ಲವರ್ ನ ಕೊಲೆಯಾಗುತ್ತದೆ ಹಾಗೂ ರಾಜಾಹುಲಿ ಕಾರಣಕರ್ತನಾಗುತ್ತಾನೆ.

ತಂದೆಯ ಸಹಾಯದಿಂದ ಪೋಲೀಸ್ ಕಸ್ಟಡಿಯಿಂದ ಹೊರಬರುತ್ತಾನೆ. ತಂದೆಗೆ ಮಗನ ಪ್ರೇಮ ವಿಚಾರವೆಲ್ಲಾ ತಿಳಿಯುತ್ತದೆ. ಮುಂದೆ..? ರಾಜಾಹುಲಿ ತನ್ನ ತಂದೆಯನ್ನು ಮದುವೆಗೆ ಒಪ್ಪಿಸುವನಾ..?ಹುಡುಗಿಯ ಮನೆಯವರನ್ನು ಹೇಗೆ ಕನ್ವಿನ್ಸ್ ಮಾಡುತ್ತಾನೆ..?ಇವನ ಜೀವದ ಗೆಳೆಯರು ಹೇಗೆ ಸಹಾಯ ಮಾಡುತ್ತಾರೆ..ಎನ್ನುವುದನ್ನು ಚಿತ್ರಮಂದಿರದಲ್ಲೇ ನೋಡಿ ಆನಂದಿಸಿ.

ಚಿತ್ರದ ಪ್ಲಸ್ ಪಾಯಿಂಟ್ಸ್ :

ಪ್ರಭಾಕರ್ ರವರಕಥೆ, ಗುರುದೇಶಪಾಂಡೆಯವರ ಚಿತ್ರಕಥೆ ಮತ್ತು ಮಂಜು ಮಾಂಡವ್ಯರವರ ಮಂಡ್ಯ ಶೈಲಿ ಚುರುಕು ಸಂಭಾಷಣೆ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತದೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಯಶ್ ಕನ್ನಡ ಚಿತ್ರರಂಗದ ಮುಂದಿನ ಹುಲಿಯಾಗುವ ಎಲ್ಲ ಲಕ್ಷಣಗಳು ಈ ಚಿತ್ರದಲ್ಲಿ ಗೋಚರಿಸುತ್ತದೆ. ನಾಯಕಿಯಾಗಿ ಮೇಘನಾ ಸುಂದರ್ ರಾಜ್ ಪಕ್ಕದಮನೆ ಹುಡುಗಿಯಂತೆ ಕಾಣುತ್ತಾಳೆ. ಕನ್ನಡ ಚಿತ್ರ ನಾಯಾಕಿಯಾಗಲು ಇರಬೇಕಾದ ಸೌಂದರ್ಯ ಒಂದು ಚಿಟಿಕೆ ಕಡಿಮೆ ಇದ್ದರೂ ತಮ್ಮ ಅಭಿನಯದಿಂದಲೇ ಬೇರೆಲ್ಲಾ ಋಣಾತ್ಮಕ ಅಂಶಗಳನ್ನು ನಿವಾಳಿಸಿ ಎಸೆಯುತ್ತಾರೆ.

ಮೊದಲರ್ಧದಲ್ಲಿ ಕಾಣಸಿಗದ ನಾಯಕನ ತಂದೆ ಪಾತ್ರಧಾರಿ ಚರಣ್ ರಾಜ್ ದ್ವಿತೀಯಾರ್ಧದ ಪೂರ್ತಿ ನಮ್ಮನ್ನು ಆವರಿಸುತ್ತಾರೆ. ಪೋಷಕ ಪಾತ್ರಧಾರಿಗಳು.. ಪ್ರಮುಖವಾಗಿ ನಾಯಕನ ಗೆಳೆಯರು ಮತ್ತು ನಾಯಕಿಯ ಗೆಳತಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕನ ಗೆಳೆಯ ಚಿಕ್ಕನ ಕಾಮೆಡಿ ಟೈಮಿಂಗ್ ಮತ್ತೊಬ್ಬ ಗೆಳೆಯ ಹರ್ಷನ ಅಭಿನಯವನ್ನು ತೂಗಿಸಿಕೊಂಡು ಹೋಗುವಲ್ಲಿ ಸಹಾಯ ಮಾಡುತ್ತದೆ. ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಛಾಯಾಗ್ರಹಣ, ವಿಷ್ಣುವರ್ಧನ್ ರವರು ಮಂಡ್ಯದ ಅಪರೂಪದ ಸ್ಥಳಗಳಲ್ಲಿ ಚಿತ್ರೀಕರಿಸಿ ಕಣ್ಣಿಗೆ ತಂಪನ್ನೆರೆಯುತ್ತಾರೆ.

ಮೈನಸ್ ಅಂಶಗಳು ಇಲ್ಲವೆಂದಿಲ್ಲ..

ಹಿನ್ನೆಲೆ ಸಂಗೀತ ಇನ್ನೂ ಪರಿಣಾಮಕಾರಿಯಾಗಿ ಕೊಡಬಹುದಿತ್ತು. ಸಂಕಲನವೂ ಅಷ್ಟೆ.. ವಿಶೇಷತೆ ಇಲ್ಲ. ನಾದಬ್ರಹ್ಮ ಹಂಸಲೇಖಾರ ಸಾಹಿತ್ಯ ಮತ್ತು ಸಂಗೀತದಲ್ಲಿ ಹೊಸತನ ಇಣುಕಿಲ್ಲ..ಅಬ್ಬರದ ಸಂಗೀತ ಹಾಡಿನ ಸಾಹಿತ್ಯ ಕೇಳಿಸದಂತೆ ಮಾಡಲು ಯಶಸ್ವಿಯಾಗಿದೆ. ಅಷ್ಟಾಗ್ಯೂ ಒಂದು ಹಾಡು ಗುನುಗುವಂತಿದೆ.

ಒಟ್ಟಿನಲ್ಲಿ ನಿರ್ದೇಶಕ ಗುರುದೇಶಪಾಂಡೆಯವರು ಉತ್ತಮ ಕಥೆ ಆಯ್ಕೆ ಮಾಡಿ ಅದಕ್ಕೆ ತಕ್ಕ ಪಾತ್ರವರ್ಗ ಹುಡುಕಿ ಉತ್ತಮ ತಂತ್ರಜ್ನರ ಜೊತೆಗೂಡಿ ಒಳ್ಳೆಯ ಚಿತ್ರವನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ.

ಕೊನೆ ಸಿಡಿ : ಅಂದಹಾಗೆ ಕನ್ನಡ ರಾಜ್ಯೋತ್ಸವದ ದಿನ ಬಿಡುಗಡೆಯಾದ ಈ 'ರಾಜಾಹುಲಿ' ಚಿತ್ರ ತಮಿಳಿನ ಸೂಪರ್ ಹಿಟ್ ಮೂವಿ 'ಸುಂದರ ಪಾಂಡಿಯನ್' ಚಿತ್ರದ ರಿಮೇಕ್ ಅಂದರೆ ಯಥಾವತ್ತು ನಕಲು.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited